ಪ್ರವಾಹ ಭೀತಿ: ಬಳ್ಳಾರಿಯ 66 ಗ್ರಾಮಗಳಲ್ಲಿ ಕಟ್ಟೆಚ್ಚರ

Public TV
1 Min Read

– ನದಿ ಪಾತ್ರದ ತಾಲೂಕುಗಳಲ್ಲಿ ಸಕಲ ಸಿದ್ಧತೆ

ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ತುಂಗಭದ್ರಾ ನದಿಯಿಂದ ಪ್ರವಾಹ ಭೀತಿ ಎದುರಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಣಿ ಜಿಲ್ಲೆಯ ಅಂದಾಜು 66 ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತುಂಗಾ, ಭದ್ರಾ ಮತ್ತು ವೇದಾವತಿ ನದಿಗಳಿಂದ ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವುದರಿಂದ ಜಿಲ್ಲೆಯ ಹಡಗಲಿ, ಹರಪನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯ ಈ ಮೂರು ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಕಳೆದ ಬಾರಿ ಪ್ರವಾಹದ ಭೀತಿ ಎದುರಾಗಿದ್ದರಿಂದ ಅಂದಾಜು 3 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಳಜಿ ಕೇಂದ್ರಗಳಲ್ಲಿ ಇಡಲಾಗಿತ್ತು. ಅಲ್ಲದೆ ಜಾನುವಾರುಗಳ ರಕ್ಷಣೆಗೆಂದು ಕ್ಯಾಟಲ್ ಕೇಂದ್ರಗಳನ್ನೂ ತೆರೆಯಲಾಗಿತ್ತು. ಈ ಬಾರಿಯೂ ಕೂಡ ಕ್ಯಾಟಲ್ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಸಿರುಗುಪ್ಪ ಹಾಗೂ ಹಡಗಲಿ ಭಾಗದಲ್ಲಿ ಬೋಟ್ ಗಳ ವ್ಯವಸ್ಥೆ ಮಾಡಲಾಗಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ ಕೋವಿಡ್ ಸೋಂಕಿತರು ಕಂಡು ಬಂದರೆ ಕಾಳಜಿ ಕೇಂದ್ರಗಳಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *