– ದಿನೇ ದಿನೇ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ದಿನ ಕೇವಲ ಎರಡು, ಮೂರು ದಾಖಲಾಗುತ್ತಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದೀಗ ನಿತ್ಯ 20 ರಿಂದ 25ಕ್ಕೆ ಹೆಚ್ಚಳವಾಗಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 39 ಪ್ರಕರಣಗಳು ದಾಖಲಾಗಿವೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಎಲ್ಲ ಪ್ರವಾಸಿ ತಾಣಗಳನ್ನು ಏ.20ರ ವರೆಗೆ ಬಂದ್ ಮಾಡಿ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಏಪ್ರಿಲ್ 3ರಂದು ಆದೇಶ ಹೊರಡಿಸಿದ್ದರು. ಆದರೆ ಕೊಡಗಿನ ಹೋಮ್ ಸ್ಟೇ ಮಾಲೀಕರ ಸಂಘ, ಹೊಟೇಲ್ ಹಾಗೂ ರೆಸಾರ್ಟ್ ಮಾಲೀಕರ ಸಂಘ ಸಚಿವರಿಗೆ ಒತ್ತಡ ತಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಮಾಡಿ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯುವಂತೆ ಮಾಡಿದೆ. ಹೀಗಾಗಿಯೇ ಏಪ್ರಿಲ್ 9 ರಿಂದ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ.
ಪ್ರವಾಸಿ ತಾಣಗಳು ಮತ್ತೆ ಓಪನ್ ಆಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿಲ್ಲ. ಆದರೆ ಬರುವ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಎಷ್ಟೋ ಪ್ರವಾಸಿಗರು ಮಾಸ್ಕ್ ಧರಿಸಿರುವುದಿಲ್ಲ. ಮತ್ತೆಷ್ಟೋ ಪ್ರವಾಸಿಗರು ನಾಮಕಾವಸ್ಥೆಗೆ ಮಾಸ್ಕ್ ಧರಿಸಿರುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕವಿದೆ. ಹೀಗಾಗಿ ಜಿಲ್ಲಾಧಿಕಾರಿ ಯಾರ ಒತ್ತಾಯಕ್ಕೂ ಮಣಿಯದೆ ಜಿಲ್ಲೆಯ ಪ್ರವಾಸಿತಾಣಗಳನ್ನು ಬಂದ್ ಮಾಡಿ ಪ್ರವಾಸಿಗರು ಬರದಂತೆ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೊಡಗಿನಲ್ಲಿರುವ ಐದೂವರೆ, ಆರು ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಬೆಂಗಳೂರಿನಷ್ಟೇ ಇದೆ. ಹೀಗಾಗಿ ಸದ್ಯಕ್ಕೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಾನೂ ಕೂಡ ವ್ಯಾಪಾರಿಯೇ ಆಗಿದ್ದು, ನಾನೂ ಪ್ರವಾಸಿಗರನ್ನೇ ನಂಬಿಕೊಂಡಿದ್ದೇನೆ. ಆದರೆ ನಾವು ಜೀವಂತವಾಗಿದ್ದರೆ, ಮುಂದೆ ಕೆಲಸ ಮಾಡಬಹುದು, ಸಂಪಾದಿಸಬಹುದು. ದುಡಿಮೆಗಿಂತ ಜೀವ ಮುಖ್ಯ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ 10 ರಿಂದ ಹದಿನೈದು ದಿನಗಳ ಕಾಲ ಲಾಕ್‍ಡೌನ್ ಮಾಡಿದರೂ ತಪ್ಪಿಲ್ಲ ಎಂದು ವ್ಯಾಪಾರಿ ಮಧು ಆತಂಕ ವ್ಯಕ್ತಪಡಿಸಿದ್ದಾರೆ.