ಪ್ರವಾಸಿಗರಿಂದ ಕೊಡಗಿಗೆ ಕೊರೊನಾ ಆತಂಕ

Public TV
1 Min Read

ಮಡಿಕೇರಿ: ರಾಜ್ಯದ ಬಹುತೇಕ ಕಡೆಗಳಲ್ಲಿ ಇದೀಗಾ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಸಾಕಷ್ಟು ಮಾರ್ಗಸೂಚಿಗಳನ್ನು ಮಾಡುತ್ತಿದೆ. ಅಲ್ಲದೆ ಗಡಿಭಾಗದಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಅದರೆ ಈ ಮಾರ್ಗಸೂಚಿಗಳು ಪ್ರವಾಸಿಗರಿಗೆ ಮಾತ್ರ ಅನ್ವಯವಾಗುವುದಿಲ್ಲ ಎನ್ನುವ ಅನುಮಾನ ಕಾಡುತ್ತಿದೆ.

ಕೊಡಗಿನಲ್ಲಿ ಕೆಲವು ತಿಂಗಳಿನಿಂದ ಕೊರೊನಾ ಸೋಂಕಿತರ ಸಂಖ್ಯೆ ಕಡೆಮೆಯಾಗುತ್ತಿದ್ದರೂ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರಿಂದ ಮತ್ತೆ ಕಂಟಕ ಎದುರಾಗುತ್ತಾ ಎನ್ನುವ ಆತಂಕ ಶುರುವಾಗಿದೆ. ಸಾಮಾನ್ಯವಾಗಿ ಶಾನಿವಾರ, ಭಾನುವಾರ ಬಂದ್ರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನ ಕಡೆ ಮುಖ ಮಾಡುತ್ತಾರೆ. ರಾಜ್ಯ ಅಂತರರಾಜ್ಯ ಪ್ರವಾಸಿಗರು ಜಿಲ್ಲೆಯ ನಿಸರ್ಗಧಾಮ, ದುಬಾರೆ, ಮಡಿಕೇರಿಯ ರಾಜಾಸೀಟ್ ಅಬ್ಬಿ ಜಲಪಾತ ಹೀಗೆ ನಾನಾ ಕಡೆಯ ಪ್ರೇಕ್ಷಣೀಯ ಸ್ಥಳಗಳಿಗೆ ಬೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಆದರೆ ಬರುವ ಪ್ರವಾಸಿಗರು ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮಾಡುವುದು ಮಾತ್ರ ಸಂಪೂರ್ಣ ಮರೆಯುತ್ತಿದ್ದಾರೆ. ಹೀಗಾಗಿ ಇಲ್ಲಿಯ ಸ್ಥಳೀಯ ನಿವಾಸಿಗಳಿಗೆ ಪ್ರವಾಸಿಗರಿಂದ ಕಂಟಕ ಎದುರಾಗುತ್ತಾ ಎಂಬ ಭಯ ಕಾಡುತ್ತಿದೆ.

ದುಬಾರೆಯ ಕಾವೇರಿ ಹೊಳೆಯಲ್ಲಿ ನೂರಾರು ಜನ ಜಲಕ್ರೀಡೆಗಳನ್ನು ಆಡುತ್ತಿದ್ದಾರೆ. ನೀರೊಳಗೆ ಬಿದ್ದು ಒರಳಾಡುತ್ತಿರುವುದು ಕೊರೊನಾ ಹರಡುವುದಕ್ಕೆ ಸುಲಭವಾದ ಮಾರ್ಗವಾಗಿದೆ. ಜನರು ಮಾತ್ರ ಇದ್ಯಾವುದನ್ನೂ ಗಮನಕ್ಕೆ ಹಾಕಿಕೊಳ್ಳದೆ, ಎಂಜಾಯ್ ಮಾಡುತ್ತಿದ್ದಾರೆ. ದೇಶದಲ್ಲಿ ಈಗಾಗಲೇ ಕೊರೊನಾ ಎರಡನೆಯ ಅಲೆ ಶುರುವಾಗಿದೆ ಎನ್ನಲಾಗುತ್ತಿದ್ದು, ಆರೋಗ್ಯ ತಜ್ಞರು, ಸರ್ಕಾರಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಎಂದು ಹೇಳುತ್ತಲೇ ಇದ್ದಾರೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ವೇಗವಾಗಿ ಹರಡುತ್ತಾ ಎಂಬ ಆತಂಕ ಎದುರಾಗಿದೆ.

ಪ್ರವಾಸಿ ಸ್ಥಳಗಳಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತದೆ. ಬರುವ ಪ್ರವಾಸಿಗರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಸೂತ್ತೋಲೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *