ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಭರಚುಕ್ಕಿ ಜಲಪಾತ

Public TV
1 Min Read

– ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಜಲಪಾತ

ಚಾಮರಾಜನಗರ: ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ 35 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಜಿಲ್ಲೆಯ ಭರಚುಕ್ಕಿ ಧುಮ್ಮಿಕ್ಕುತ್ತಿದ್ದು, ಕಾವೇರಿಯ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.

ಕೇರಳದ ವೈಯನಾಡು ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆಯಾಗಿದ್ದು, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ನದಿಗೆ 30 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಕೆಆರ್‍ಎಸ್ ಜಲಾಶಯದಿಂದಲು 6 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಮೈಸೂರು ಜಿಲ್ಲೆಯ ಮೂಲಕ ಹರಿದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿಗೆ ಪ್ರವೇಶಿಸುವ ಕಾವೇರಿ, ಶಿವನಸಮುದ್ರದ ಬಳಿ ಎರಡು ಕವಲಾಗಿ ಹರಿದು ಒಂದೆಡೆ ಗಗನಚುಕ್ಕಿಯಾಗಿ ಇನ್ನೊಂದೆಡೆ ಭರಚುಕ್ಕಿಯಾಗಿ ಭೋರ್ಗೆರೆದು ಧುಮ್ಮಿಕುತ್ತಿದೆ. ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣುಗಳೆರಡು ಸಾಲದಂತೆ ಭಾಸವಾಗುತ್ತಿದೆ.

ಕಳೆದ ಕೆಲವು ತಿಂಗಳಿಂದ ನೀರಿಲ್ಲದೆ ಬಣಗುಡುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವ ಕಳೆ ಬಂದಿದೆ. ಕಾವೇರಿಯ ಜಲವೈಭವ ಅನಾವರಣಗೊಂಡಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ಭರಚುಕ್ಕಿಯಲ್ಲಿ ಅತ್ಯಂತ ವಿಶಾಲವಾಗಿ ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುವ ದೃಶ್ಯಕಾವ್ಯ ವರ್ಣನಾತೀತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *