ಪ್ರವಾದಿಗೆ ಕೋಪ ಬಂದ್ರೆ ದೇಹದಿಂದ ತಲೆ ಬೇರ್ಪಡುತ್ತೆ- ಮಂಗಳೂರಲ್ಲಿ ಮತ್ತೆ ಗೋಡೆಬರಹ

Public TV
2 Min Read

– ಸಿ.ಟಿ ರವಿ, ಯು.ಟಿ ಖಾದರ್ ಹೇಳಿದ್ದೇನು?

ಮಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಕಡಲನಗರಿ ಮಂಗಳೂರಿನಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹೇಳಿ ಒಂದು ಸಂದೇಶ ಕೊಟ್ಟು ಗೋಡೆಬರಹ ಬರೆಯಲಾಗಿತ್ತು. ಇದರಿಂದ ಕರಾವಳಿಯಲ್ಲಿ ಆತಂಕ ಎದುರಾಗಿತ್ತು. ಪೊಲೀಸರು ದೇಶದ್ರೋಹಿಗಳ ಬೆನ್ನಟ್ಟಿದ್ದಾರೆ. ಆದರೆ ಈ ಬೆನ್ನಲ್ಲೆ ಮತ್ತೊಂದು ಗೋಡೆ ಬರಹ ಈಗ ವಿವಾದ ಸೃಷ್ಟಿ ಮಾಡಿದೆ.

ಹೌದು. ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಕ್ರ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾಟ್‌ರ್ಮೆಂಟ್ ನ ಗೋಡೆ ಮೇಲೆ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹಾಕಿ ಗೋಡೆ ಬರಹ ಬರೆಯಲಾಗಿತ್ತು. ಗೋಡೆಯಲ್ಲಿ ಸಿಕ್ಕ ಸಂದೇಶ ಇಡೀ ಕರಾವಳಿಯನ್ನೇ ಆತಂಕಕ್ಕೆ ದೂಡಿತ್ತು. ಈ ಗೋಡೆ ಬರಹ ಕರಾವಳಿಯಲ್ಲಿ ಕಿಚ್ಚು ಹೆಚ್ಚಿಸಿತ್ತು. ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ರು. ಆ ದೇಶದ್ರೋಹಿಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಈ ರೀತಿಯ ಗೋಡೆ ಬರಹ ಈಗ ಮಂಗಳೂರಿನಲ್ಲಿ ಕಾಣಿಸಿದೆ.

ಮಂಗಳೂರಿನ ಕೋರ್ಟ್ ರಸ್ತೆಯಲ್ಲಿ ಈ ರೀತಿಯ ಗೋಡೆ ಬರಹವನ್ನು ಬರೆಯಲಾಗಿದೆ. ಇದು ಕೋರ್ಟ್ ರಸ್ತೆಯಲ್ಲಿರುವ ಹಳೇ ಪೊಲೀಸ್ ಔಟ್ ಪೋಸ್ಟ್. ಇದರ ಮೇಲೆ ಕಿಡಿಗೇಡಿಗಳು,’Gustuk e Rasool ek hi saza sar tan say juda’ ಎಂದು ಗೋಡೆಬರಹ ಬರೆದಿದ್ದಾರೆ. ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂಬ ಅರ್ಥ ನೀಡುವ ಬರವಣಿಗೆ ಇದಾಗಿದೆ. ಇದನ್ನೂ ಓದಿ:  ಮಂಗಳೂರಿನ ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಲಷ್ಕರ್ ಜಿಂದಾಬಾದ್ ಬರಹ!

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಉಗ್ರವಾದವನ್ನು ಸಹಿಸಿಕೊಳ್ಳಲು ದೇಶದಲ್ಲಿ ಜಾಗವಿಲ್ಲ, ಉಗ್ರವಾದಿಗಳು ಹೋಗಬೇಕಾಗಿದ್ದು ಮಸಣಕ್ಕೆ ಮಾತ್ರ. ಖಬರ್ ಸ್ಥಾನಕ್ಕೆ ಕಳುಹಿಸುವಂಥ ಕೆಲಸವನ್ನು ಸೈನಿಕರು ಹಾಗೂ ಪೊಲೀಸರು ಸಮರ್ಥವಾಗಿ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ದುಷ್ಕರ್ಮಿಗಳು ಎಚ್ಚರಿಕೆಯಿಂದರಬೇಕು ಅಂತ ಹೇಳಿದ್ದಾರೆ.

ಮಾಜಿ ಸಚಿವ ಯು.ಟಿ.ಖಾದರ್ ಈ ಬಗ್ಗೆ ಪ್ರತಿಕ್ರಿಯಿಸಿ, ನಗರದಲ್ಲಿ ಗೋಡೆ ಬರಹ ಬರೆಯುವುದನ್ನ ತೀವ್ರವಾಗಿ ಖಂಡಿಸುತ್ತೇವೆ. ಇದನ್ನ ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇದರ ಪತ್ತೆಗೆ ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ. ಇವರಿಗೆ ಬೆಂಬಲವಾಗಿರುವರನ್ನ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತವೆ. ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. ಅದು ಬಿಟ್ಟು 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ. ಅವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ಮಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಜವಾಬ್ದಾರಿ ಅಲ್ವಾ? ರಾಜ್ಯ ಸರ್ಕಾರ ಇಂದು ಕೋಮಾ ಸ್ಥಿತಿಯಲ್ಲಿ ಇದೆ ಅಂತ ಟೀಕಿಸಿದ್ದಾರೆ.

ಸದ್ಯ ಗೋಡೆಬರಹ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೋರ್ಟ್ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣ ರಾಜಕೀಯ ತಿರುವ ಪಡೆದು ಹಳ್ಳ ಹಿಡಿಯೋದಕ್ಕೂ ಮೊದಲು ಪೊಲೀಸರು ಆರೋಪಿಗಳನ್ನ ಬಂಧಿಸುವ ಅವಶ್ಯಕತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *