ಪ್ರಯಾಣಿಕರೇ ಗಮನಿಸಿ, ಬೆಂಗ್ಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಓಡುತ್ತೆ ಬಸ್

Public TV
3 Min Read

– ಕೊನೆಯ ಬಸ್ ಸಂಜೆ 7ಕ್ಕೆ ಹೊರಡುತ್ತದೆ
– ಎಲ್ಲೂ ನಿಲ್ಲಲ್ಲ, ರಾತ್ರಿ ಊಟವನ್ನು ಕಟ್ಟಿಕೊಂಡು ಬಸ್ ಹತ್ತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಕೇವಲ 5 ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ ಆರಂಭಿಸಿದ್ದಕ್ಕೆ ಜನತೆಯಿಂದ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಈಗ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಬಸ್ ಆರಂಭಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಸಾರಿಗೆ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ಬೆಂಗಳೂರಿನಿಂದ ಮೈಸೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಗಳೂರು ಮಾರ್ಗದಲ್ಲಿ ಮಾತ್ರ ಬಸ್ ಸಂಚಾರ ಆರಂಭಿಸುವುದಾಗಿ ಹೇಳಿತ್ತು. ಆದರೆ ಇಂದು ಬೆಳಗ್ಗೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಉತ್ತರ ಕರ್ನಾಟಕ ಭಾಗಕ್ಕೂ ಬಸ್ ಆರಂಭಗೊಳ್ಳಲಿದೆ ಎಂಬ ವಿಚಾರ ತಿಳಿದು ಅಲ್ಲಿನ ಜನತೆ ಆಗಮಿಸಿದ್ದರು.

ರಾತ್ರಿ 7 ರಿಂದ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ಒಳಗಡೆ ತಲುಪುವ ಮಾರ್ಗದಲ್ಲಿ ಮಾತ್ರ ಬಸ್ ಸಂಚಾರವನ್ನು ಕೆಎಸ್‌ಆರ್‌ಟಿಸಿ ಆರಂಭಿಸಿತ್ತು. ಉತ್ತರ ಕರ್ನಾಟಕದ ಕೆಲ ಜಿಲ್ಲಾ ಕೇಂದ್ರಗಳನ್ನು ಈ ಅವಧಿಯಲ್ಲಿ ತಲುಪುವುದು ಕಷ್ಟವಾದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಭಾಗಕ್ಕೆ ಬಸ್ ಓಡಿಸದೇ ಇರಲು ನಿರ್ಧರಿಸಿತ್ತು.

ಈ ವಿಚಾರ ತಿಳಿಯದ ಹಲವು ಜನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದು ಇವರಿಗೆ ಸಮಸ್ಯೆಯಾಗಿತ್ತು. ಪಬ್ಲಿಕ್ ಟಿವಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಒಂದು ಭಾಗಕ್ಕೆ ಮಾತ್ರ ಯಾಕೆ ಈ ಸೇವೆ? ಉಳಿದ ಜಿಲ್ಲೆಗಳಿಗೆ ಯಾಕೆ ಬಸ್ ಸೇವೆ ಇಲ್ಲ ಎಂದು ಪ್ರಶ್ನಿಸಿತ್ತು. ಜನರಿಂದಲೂ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಈಗ ಉತ್ತರ ಕರ್ನಾಟಕದ ಭಾಗಗಳಿಗೂ ಬಸ್ ಓಡಿಸಲು ಮುಂದಾಗಿದೆ.

ವ್ಯವಸ್ಥೆ ಹೇಗಿದೆ?
ರಾತ್ರಿ ಹತ್ತಿ ಬೆಳಗ್ಗೆ ತಲುಪುವ ಸ್ಥಳಗಳಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಸ್ಸುಗಳ ಕಾರ್ಯಾಚರಣೆಯ ಸಮಯವನ್ನು ಸಂಜೆ 7 ಗಂಟೆಯವರೆಗೆ ವಿಸ್ತರಿಸಲಾಗಿದೆ. ಅಂದರೆ ಕೊನೆಯ ಬಸ್ಸು ಸಂಜೆ 7 ಗಂಟೆಗೆ ಬೆಂಗಳೂರು ಬಿಡಲಿದೆ. ಉದಾಹರಣೆಗೆ ಕಲುಬುರಗಿ, ಬೀದರ್ ಸಂಜೆ 7ಕ್ಕೆ ಬೆಂಗಳೂರಿನಿಂದ ಹೊರಟು ನಾಡಿದ್ದು ಬೆಳಗ್ಗೆ ನಿಗದಿತ ನಿಲ್ದಾಣ ತಲುಪುತ್ತದೆ. ನಾಳೆಯ ಪ್ರಯಾಣಕ್ಕಾಗಿ 148 ಬಸ್ಸುಗಳು, 3,600 ಅಸನಗಳನ್ನ ಕಾಯ್ದಿರಿಸಲಾಗಿದೆ.

ಬೆಂಗಳೂರಿನಿಂದ ಎಲ್ಲಾ ಜಿಲ್ಲಾ ಕೇಂದ್ರಕ್ಕೆ ಸಂಜೆ 7 ಗಂಟೆಯ ಒಳಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಒಂದು ಬಸ್ಸಿನಲ್ಲಿ 30 ಜನ ಒಂದು ಜಿಲ್ಲೆಗೆ ಹೋಗುವಂತಿರಬೇಕು. ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಜೆ 7 ಗಂಟೆಗೆ ಬಸ್ ಹೊರಡಲಿದೆ.

ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಬಸ್ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಆದ ಬಳಿಕವೇ ಬಸ್ ಹತ್ತಲು ಅವಕಾಶ ನೀಡಲಾಗುತ್ತದೆ. 10 ವರ್ಷದ ಒಳಗಡೆ ಮತ್ತು 60 ವರ್ಷ ಮೀರಿದ ಪ್ರಯಾಣಿಕರು ಪ್ರಯಾಣಿಸುವಂತಿಲ್ಲ.

ಹವಾನಿಯಂತ್ರಿತ ಬಸ್ಸುಗಳ ಕಾರ್ಯಾಚರಣೆಗೆ ಅವಕಾಶ ನೀಡಿಲ್ಲ. ಮುಂಗಡ ಆಸನಗಳನ್ನು ಕೆಎಸ್‌ಆರ್‌ಟಿಸಿ ವೆಬ್‍ಸೈಟ್ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ. ಅಲ್ಲದೇ ಪ್ರಯಾಣಿಕರಿಗೆ ಕಡಿಮೆ ಲಗೇಜ್ ಹಾಗೂ ಐಡಿ ಕಾರ್ಡ್ ತರುವಂತೆ ಸೂಚನೆ ನೀಡಿದೆ. ಅಲ್ಲದೇ ಸುರಕ್ಷತೆಯ ದೃಷ್ಟಿಯಿಂದ ಮಾರ್ಗ ಮಧ್ಯೆ ಯಾವುದೇ ಸ್ಥಳದಲ್ಲಿ ನಿಲುಗಡೆ ಇಲ್ಲದೇ ಇರುವುದರಿಂದ ನೀರು, ಅಗತ್ಯ ಆಹಾರವನ್ನು ತರಲು ಮನವಿ ಮಾಡಿದೆ.

ಬುಕ್ಕಿಂಗ್ ವ್ಯವಸ್ಥೆ ಹೇಗೆ?
ಬೆಂಗಳೂರಿನಿಂದ – ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ರಾಯಚೂರು, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪ್ಪನ ಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ಶಿವಮೊಗ್ಗ, ಸಿರ್ಸಿ, ಉಡುಪಿ, ಯಾದಗಿರಿ.

ಬೆಂಗಳೂರಿಗೆ – ಬೆಳಗಾವಿ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಕಲಬುರ್ಗಿ, ಹುಬ್ಬಳ್ಳಿ, ಗಂಗಾವತಿ, ಹಡಗಲಿ, ಹರಿಹರ, ಹೊಸಪೇಟೆ, ಕಂಪ್ಲಿ, ಕುಮಟಾ, ಕುಷ್ಟಗಿ, ಕೊಪ್ಪಳ, ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗಾ, ಸಂಡೂರು, ಶಿರಗುಪ್ಪ, ಯಲ್ಲಾಪುರ, ಮಂಗಳೂರು, ಮೈಸೂರು, ವಿಜಯಪುರ.

Share This Article
Leave a Comment

Leave a Reply

Your email address will not be published. Required fields are marked *