ಹಿಟ್ಲರ್‌ಗಿಂತ ಮೋದಿ ಕೆಟ್ಟದಾಗಿ ವರ್ತಿಸ್ತಿದ್ದಾರೆ, ಸಹಿಸಿಕೊಳ್ಳಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

Public TV
2 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್‌ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹೆಚ್ಚು ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಗ್ಯಾಸ್ ದರ ಹೆಚ್ಚಳ ಖಂಡಿಸಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕಾಂಗ್ರೆಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ದಬ್ಬಾಳಿಕೆಯ ಮೂಲಕ ದೇಶ ಆಳುತ್ತಿದ್ದಾರೆ. ಪೆಟ್ರೋಲ್ ಗೆ ಆಗಿರುವ ಬೆಲೆ ಏರಿಕೆಯಲ್ಲಿ 33 ರೂ. ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ವಿದೇಶದಲ್ಲಿ ಬೆಲೆ ಕಡಿಮೆ ಆಗಿದ್ದರೂ ದುಡ್ಡು ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೆರಿಗೆ ಜಾಸ್ತಿ ಮಾಡಿದೆ. ಎಲ್ಲಾ ಬೆಲೆ ಹೆಚ್ಚು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ಹಿಟ್ಲರ್ ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹೆಚ್ಚು ದಿನ ಸಹಿಸಿಕೊಳ್ಳಲು ಆಗುವುದಿಲ್ಲ. ದೇಶ ತಪ್ಪು ದಾರಿಯಲ್ಲಿ ಹೋಗುತ್ತಿದೆ. ಒಗ್ಗೂಡಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಎಲ್ಲರೂ ಸೇರಿ ಒಟ್ಟಾಗಿ ಜನರಿಗೋಸ್ಕರ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಲಜ್ಜೆಗೆಟ್ಟ ಸರ್ಕಾರ ಇದು. ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳಲು ದುಡ್ಡಿಲ್ಲ. ಡಿಸಿಎಂ ಲಕ್ಷ್ಮಣ್ ಸವದಿ ಡಿಸೇಲ್ ಕಳ್ಳತನ ಮಾಡುತ್ತಿದ್ದಾರೆ. ಬಿಎಂಟಿಸಿ ಡಿಪೋದಿಂದ ಕಾರಿಗೆ ಡಿಸೇಲ್ ಹಾಕಿಸುತ್ತಿದ್ದಾರೆ. ಯಾಕಂದ್ರೆ ಡಿಸೇಲ್, ಪೆಟ್ರೋಲ್ ಹಾಕಿಸಿಕೊಳ್ಳಲು ದುಡ್ಡಿಲ್ಲ. ದಿನೇ ದಿನೇ ತೈಲ ಬೆಲೆ ಏರಿಸುತ್ತಿದ್ದಾರೆ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಹರಿಹಾಯ್ದರು.

ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನಾವು ನೋಡೇ ಇರಲಿಲ್ಲ. ಮೋದಿ ಇಷ್ಟು ದೊಡ್ಡ ಗಡ್ಡ ಬಿಟ್ಟಿರೋದು ರವೀಂದ್ರನಾಥ್ ಟ್ಯಾಗೋರ್ ತರ ಕಾಣೋಕೆ. ಬಂಗಾಳದಲ್ಲಿ ಚುನಾವಣೆ ಇದೆ. ಹೀಗಾಗಿ ಗಡ್ಡ ಬಿಡುತ್ತಿದ್ದಾರೆ. ಬಹಳ ಸ್ಟ್ರಾಂಗ್, 56 ಇಂಜಿನ ಎದೆ ಇರೋ ಮೋದಿ ಅಂತಾರೆ. ಹೌದು 56 ಇಂಚಿನ ಎದೆ ಇದ್ರೆನೆ ರೈತರಿಗೆ ಹೊಡಿಯೊಕಾಗೋದು, ದರ ಜಾಸ್ತಿ ಮಾಡೋಕಾಗೋದು, ಯುವಕರಿಗೆ ಹೊಡಿಯೋಕಾಗೋದು ಎಂದು ಆಕ್ರೊಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳದಲ್ಲಿಯೇ ಕೈ ಕಾರ್ಯಕರ್ತರು ಅಡುಗೆ ಮಾಡಿ ಅಣಕು ಪ್ರದರ್ಶನ ಮಾಡಿದರು. ಪೂರಿ, ಪಲಾವ್ ಮಾಡಿ ಗಮನ ಸೆಳೆದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಆಗಮಿಸಿ, ಕಾಂಗ್ರೆಸ್ ನಾಯಕರ ಮನವಿ ಸ್ಬೀಕರಿಸಿದರು.

Share This Article
Leave a Comment

Leave a Reply

Your email address will not be published. Required fields are marked *