ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆಸಿ ಬರಿಗೈಲಿ ಬರುವಂತಾಗಿದೆ. ಕೇಂದ್ರ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿದ್ದು, ಕಳೆಪೆ ಮಟ್ಟದ ಕ್ರಮ ಕೈಗೊಂಡಿದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೋಮವಾರವಷ್ಟೇ ಲಾಕ್‍ಡೌನ್ ಸ್ಥಿತಿಗತಿ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಇದೀಗ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಮಹಾಮಾರಿ ಕೊರೊನಾದಿಂದ ಉಂಟಾಗುವ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಮೂರು ತಿಂಗಳ ಯೋಜನೆ ರೂಪಿಸುವ ಕುರಿತು ಮಮತಾ ಬ್ಯಾನರ್ಜಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನಂತರ ಮಾತನಾಡಿರುವ ಅವರು, ಕೊರೊನಾದಿಂದ ಸದ್ಯದಲ್ಲೇ ಮುಕ್ತಿ ಹೊಂದುತ್ತೇವೆ ಎಂದು ಭಾವಿಸಬೇಡಿ. ಕೊರೊನಾ ಪರಿಸ್ಥಿತಿ ಎದುರಿಸಲು ನಾವು ಮೂರು ತಿಂಗಳ ಕಡಿಮೆ ಅವಧಿಯ ಯೋಜನೆಯನ್ನು ರೂಪಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕಾನೂನುಬದ್ಧವಾಗಿ ಬರಬೇಕಾದ ಹಣಕಾಸಿನ ಬಾಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆದ ಸಭೆಯಲ್ಲಿ ನಾನು ಹಲವು ವಿಚಾರಗಳ ಕುರಿತು ಚರ್ಚಿಸಿದ್ದೇನೆ. ಆದರೆ ಪ್ರತಿ ಬಾರಿ ಸಭೆ ನಂತರ ನಾವು ಖಾಲಿ ಕೈಯಲ್ಲಿ ಬರುವಂತಾಗಿದೆ. ಇನ್ನೂ ನಮ್ಮ ಪಾಲಿನ ಬಾಕಿಯನ್ನು ಪಡೆದಿಲ್ಲ ಎಂದು ಕಿಡಿಕಾರಿದ್ದಾರೆ.
ಕೊರೊನಾ ವೈರಸ್ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಅವರು, ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ನಾವು ಹಲವು ರೀತಿಯ ಯೋಜನೆ ರೂಪಿಸಿದ್ದು, ರೆಡ್ ಝೋನ್‍ನಲ್ಲಿ ಇನ್ನೂ ಹೆಚ್ಚಿನ ಸಡಿಲಿಕೆಯನ್ನು ನೀಡಲಾಗುವುದು. ರೆಡ್ ಝೋನ್‍ಗಳಲ್ಲೂ ಮೂರು ವಿಭಾಗಗಳಾಗಿ ವಿಂಗಡಿಸಲಾಗುವುದು. ನನ್ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ನೂರು ದಿನಗಳ ಕೆಲಸದ ಯೋಜನೆಯನ್ನು ರೂಪಿಸಲಾಗುತ್ತಿದೆ. ಕಂಟೇನ್ಮೆಂಟ್ ಝೋನ್‍ಗಳಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ತಿಳಿಸಿದ್ದಾರೆ.