ಪ್ರಧಾನಿಗೆ ಪತ್ರ ಬರೆದು 100 ರೂ. ಚಹಾವನ್ನು 15 ರೂ.ಗೆ ಇಳಿಸಿದ ಗ್ರಾಹಕ

Public TV
2 Min Read

ತಿರುವನಂತಪುರಂ: 100 ರೂ.ಗೆ ಮಾರಾಟವಾಗುತ್ತಿದ್ದ ಚಹಾವನ್ನು ಗ್ರಾಹರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ 15 ರೂ.ಗೆ ಇಳಿಸಿದ್ದಾರೆ.

ಕೇರಳದ ತ್ರಿಶ್ಯೂರ್‌ ನಿವಾಸಿ ಶಾಜಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬಾರಿಗೆ ಬೆಲೆಗೆ ಚಹಾ ಮತ್ತು ತಿಂಡಿಗಳು ಮಾರಾಟವಾಗುತ್ತಿರುವುನ್ನು ನೋಡಿ ಪ್ರಧಾನಿಗೆ ಮೇಲ್‌ ಮಾಡಿದ್ದರು. ಈ ಮೇಲ್‌ಗೆ ಪ್ರಧಾನಿ ಸ್ಪಂದಿಸಿ ಗ್ರಾಹಕರ ಹಕ್ಕುಗಳ ಪರವಾಗಿ ನಿಂತಿದ್ದಾರೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಚಹಾ ಮತ್ತು ತಿಂಡಿಗಳಿಗೆ ದರ ನಿಗದಿ ಮಾಡಿ ಪ್ರಧಾನಿ ಸಚಿವಾಲಯ ಆದೇಶ ಪ್ರಕಟಿಸಿದೆ.

ಆಗಿದ್ದು ಏನು?
ಶಾಜಿಯವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಚಹಾಗೆ 100 ರೂ, ಮಜ್ಜಿಗೆಗೆ 110 ರೂ. ತಿಂಡಿಗೆ 200 ರೂ. ನೋಡಿ ಶಾಕ್‌ ಆಗಿದ್ದಾರೆ. ಇಷ್ಟೊಂದು ದುಬಾರಿ ದರದಲ್ಲಿ ಯಾಕೆ ಮಾರಾಟ ಮಾಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಜೊತೆ ಈ ವಿಚಾರಕ್ಕೆ ಜಗಳ ಮಾಡಿದರೂ ಸಮಸ್ಯೆ ಪರಿಹಾರವಾಗದ ಕಾರಣ ನೇರವಾಗಿ ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನ ಮಹಿಳೆ

ದೂರು ನೀಡಿದ ನಂತರದ ದಿನದಲ್ಲಿ ಪ್ರಧಾನಿ ವೆಬ್‌ಸೈಟ್‌ ಗಮನಿಸಿದೆ. ಈ ವೇಳೆ ನನ್ನ ಪತ್ರದ ಹಿನ್ನೆಲೆಯಲ್ಲಿ ಚಹಾಗೆ 15 ರೂ., ಕಾಫಿಗೆ 20 ರೂ., ವಡೆಗೆ 15 ರೂ. ಗರಿಷ್ಟ ದರ ನಿಗದಿ ಪಡಿಸುವಂತೆ ವಿಮಾನ ನಿಲ್ದಾಣಗಳಿಗೆ ನಿರ್ದೇಶನ ನೀಡಿರುವ ವಿಚಾರ ತಿಳಿಯಿತು ಎಂದು ಶಾಜಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಜಿ, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು ಸಾಧಾರಣವಾಗಿ 2-3 ಗಂಟೆ ಮೊದಲೇ ಬರುತ್ತಾರೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿರುವ ಆಹಾರವನ್ನು ಬಲವಂತವಾಗಿ ದುಬಾರಿ ಬೆಲೆ ನೀಡಿ ಸೇವಿಸಬೇಕಾಗುತ್ತದೆ. ಹಿರಿಯರು ಮತ್ತು ಹಜ್‌ ಪ್ರವಾಸಿಗರಿಗೆ ಇದು ಬಹಳ ದುಬಾರಿಯಾಗುತ್ತದೆ ಎಂದು ಹೇಳಿದರು.

ಎಂಆರ್‌ಪಿ ದರ ನಿಗದಿಯಾಗಿದ್ದರೂ ಅಂಗಡಿಗಳು 4-5 ಪಟ್ಟು ಹೆಚ್ಚು ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಚಾರವನ್ನು ಕೊಚ್ಚಿ ವಿಮಾನ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ನನಗೆ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ದೂರು ನೀಡಿದ್ದೆ ಎಂದು ಶಾಜಿ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *