ಪ್ರಥಮ ದರ್ಜೆಯಲ್ಲಿ ಪಾಸ್- ಫ್ಲ್ಯಾಟ್ ಗಿಫ್ಟ್ ಪಡೆದ 10ನೇ ಕ್ಲಾಸ್ ವಿದ್ಯಾರ್ಥಿನಿ

Public TV
2 Min Read

– ಕೂಲಿ ಕಾರ್ಮಿಕನ ಮಗಳ ಶ್ರಮಕ್ಕೆ ಪ್ರತಿಫಲ
– ಮಗಳ ಯಶಸ್ಸಿಗೆ ತಂದೆ-ತಾಯಿ ಸಂತಸ
– ಐಎಎಸ್ ಅಧಿಕಾರಿಯಾಗೋ ಆಸೆ

ಇಂದೋರ್: 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿ ಗೌರವಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿಗೆ ಫ್ಲಾಟ್ ಗಿಫ್ಟ್ ನೀಡಿದಲ್ಲದೆ ಆಕೆಯ ಮುಂದಿನ ವಿದ್ಯಾಭ್ಯಾಸ ಸಂಪೂರ್ಣವಾಗಿ ಉಚಿತವಾಗಿರುವಂತೆ ಮಾಡಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಇಂದೋರ್ ನ ಫುಟ್‍ಪಾತ್ ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ಭಾರ್ತಿ ಖಂಡೇಕರ್ 10ನೇ ತರಗತಿಯಲ್ಲಿ ಶೇ.68 ಅಂಕ ಪಡೆದುಕೊಂಡಿದ್ದಾಳೆ. ಈ ವಿಚಾರ ಪಾಲಿಕೆ ಆಯುಕ್ತರ ಗಮನಕ್ಕೆ ಬಂದ ಕೂಡಲೇ ಅವರು ಆಕೆಗೆ 1 ಬಿಹೆಚ್‍ಕೆ ಫ್ಲಾಟ್ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ ಆಕೆಯ ಮುಂದಿನ ವಿದ್ಯಾಭ್ಯಾಸವನ್ನು ಉಚಿತವಾಗಿ ಪಡೆಯುವಂತೆ ಆಯುಕ್ತರು ವ್ಯವಸ್ಥೆಯನ್ನು ಮಾಡಿದ್ದಾರೆ. ಅದಕ್ಕಾಗಿ ಈಗಾಗಲೇ ಆಕೆಗೆ ಟೇಬಲ್, ಕುರ್ಚಿ, ಪುಸ್ತಕ ಹಾಗೂ ಬಟ್ಟೆಯನ್ನು ಒದಗಿಸಲಾಗಿದೆ ಎಂದು ಇಂದೋರ್ ಪ್ರಧಾನ ಮಂತ್ರಿ ಆವಾಜ್ ಯೋಜನಾದ ಪ್ರಶಾಂತ್ ತಿಳಿಸಿದ್ದಾರೆ.

ಇಂದೋರ್ ಪಾಲಿಕೆ ಆಯುಕ್ತೆ ಪ್ರತಿಭಾ ಪಾಲ್ ಅವರ ಸೂಚನೆಯ ಬಳಿಕ ಸಿಟಿ ಎಂಜಿನಿಯರ್ ಮಹೇಶ್ ಶರ್ಮಾ ಅವರು ಭಾರ್ತಿ ಖಂಡೇಕರ್ ಅವರ ಕುಟುಂಬಕ್ಕೆ ಹೊಸ ಮನೆಯ ಬಗ್ಗೆ ತಿಳಿಸಿದರು. ಇತ್ತ ತಮಗೆ ಹೊಸ ಮನೆ ಸಿಗುತ್ತೆ ಎಂಬುದನ್ನು ಕೇಳುತ್ತಿದ್ದಂತೆಯೇ ಭಾರ್ತಿ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. ಭಾರ್ತಿ ತಂದೆ ಶಾಲೆಗೆ ಹೋದವರಲ್ಲ. ಆದರೆ ತಮ್ಮ ಮಕ್ಕಳು ಕೂಡ ವಿದ್ಯಾಭ್ಯಾಸ ವಂಚಿತರಾಗಬಾರದೆಂಬ ಕನಸು ಕಂಡಿದ್ದರು. ಅಂತೆಯೇ ಕಷ್ಟಪಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಭಾರ್ತಿ ಕುಟುಂಬ ಶಿವಾಜಿ ಮಾರುಕಟ್ಟೆಯ ಎದುರಿನ ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿತ್ತು. ಆದರೆ ಒತ್ತುವರಿ ಮಾಡಿದ್ದ ಸಂದರ್ಭದಲ್ಲಿ ಆ ಗುಡಿಸಲನ್ನು ನೆಲಸಮ ಮಾಡಲಾಗಿತ್ತು.

ನಾನು ಹಾಗೂ ನನ್ನ ಪತ್ನಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಬೆಳಗ್ಗೆ ನಾನು ಕೆಲಸಕ್ಕೆ ತೆರಳಿದರೆ, ಪತ್ನಿ ಒಂದು ಶಾಲೆಯಲ್ಲಿ ಕಸ ಗುಡಿಸೋ ಕೆಲಸ ಮಾಡುತ್ತಿದ್ದಾಳೆ. ಇತ್ತ ಅಪ್ಪ-ಅಮ್ಮ ಕೆಲಸಕ್ಕೆ ಹೋದ ಬಳಿಕ ಭಾರ್ತಿ ತನ್ನ ಸಹೋದರರನ್ನು ನೋಡಿಕೊಳ್ಳುತ್ತಿದ್ದಳು. ಈಕೆ ಮಧ್ಯರಾತ್ರಿ 1 ಗಂಟೆಯವರೆಗೆ ಓದುತ್ತಿದ್ದಳು ಎಂದು ದಶರಥ ಖಂಡೇಕರ್ ತಿಳಿಸಿದ್ದಾರೆ.

ಓದಿನ ಛಲ ಇರುವ ಭಾರ್ತಿಗೆ ಮುಂದೆ ಐಎಎಸ್ ಮಾಡಬೇಕೆಂಬ ಆಸೆಯಿದೆ. ಸದ್ಯ ಈಕೆ 10ನೇ ತರಗತಿಯಲ್ಲಿ ಶೇ.68 ಫಲಿತಾಂಶ ಪಡೆದುಕೊಂಡಿದ್ದು, ತನ್ನ ಈ ಯಶಸ್ಸನ್ನು ಹೆತ್ತವರಿಗೆ ಅರ್ಪಿಸಿದ್ದಾಳೆ. ಅಲ್ಲದೆ ತನಗೆ ಶಿಕ್ಷಣ ನೀಡಿದ ಶಿಕ್ಷಕರು ಹಾಗೂ ಮಾರ್ಗದರ್ಶಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಾನು ಎಸ್‍ಎಸ್‍ಎಲ್‍ಸಿಯಲ್ಲಿ ಶೇ.68 ಫಲಿತಾಂಶ ಪಡೆದುಕೊಂಡಿದ್ದೇನೆ. ಆದರೆ ನನ್ನ ಯಶಸ್ಸಿನ ಶ್ರೇಯಸ್ಸು ಅಪ್ಪ-ಅಮ್ಮನಿಗೆ ಸಲ್ಲುತ್ತೆ. ಯಾಕಂದರೆ ಅವರು ಕಷ್ಟಪಟ್ಟು ದುಡಿದು ನನ್ನ ಓದಿಸುತ್ತಿದ್ದಾರೆ. ನನಗೆ ತುಂಬಾ ಖುಷಿಯಾಗುತ್ತಿದೆ. ಮುಂದೆ ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆ ಇದೆ. ನಾವು ಫುಟ್ ಪಾತ್ ನಲ್ಲಿ ಹುಟ್ಟಿ ಓದಿದವರು. ಹೀಗಾಗಿ ಇಂದು ನಮಗೆ ಉಳಿದುಕೊಳ್ಳಲು ಮನೆ ಕೊಡುತ್ತಿದ್ದಾರೆ. ಅಲ್ಲದೆ ಮುಂದೆ ಉಚಿತ ವಿದ್ಯಾಭ್ಯಾಸವನ್ನೂ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಬಾಲಕಿ ತಿಳಿಸಿದ್ದಾಳೆ.

ಮಗಳ ಬಗ್ಗೆ ತಾಯಿ ಲಕ್ಷ್ಮಿ ಪ್ರತಿಕ್ರಿಯಿಸಿ, ನನ್ನ ಮಗಳ ಸಾಧನೆಯಿಂದ ಇಂದು ನಮಗೆ ಮನೆ ಸಿಕ್ಕಿದೆ. ಇದಕ್ಕೂ ಮೊದಲು ನಾವು ಫಟ್ ಪಾತ್ ನಲ್ಲಿ ವಾಸವಾಗಿದ್ದೆವು. ಪತಿ-ಪತ್ನಿ ನಾವಿಬ್ಬರೂ ಅನಕ್ಷರಸ್ಥರಾಗಿದ್ದೇವೆ. ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ನನಗೆ ತಿಂಗಳಿಗೆ 2,000 ರೂ, ಬರುತ್ತಿದೆ. ನನ್ನ ಮಗಳು ಶ್ರಮಪಟ್ಟು ಓದುತ್ತಿದ್ದಾಳೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *