ಪ್ರತೀಕಾರಕ್ಕಾಗಿ ನೀರಿನ ಟ್ಯಾಂಕ್‍ಗೆ ಕ್ರಿಮಿನಾಶಕ ಹಾಕಿದ್ದ ಕಿರಾತಕ ಅರೆಸ್ಟ್

Public TV
1 Min Read

ದಾವಣಗೆರೆ: ಕುಡಿಯುವ ನೀರಿನ ಟ್ಯಾಂಕ್ ವಿಷ ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಚ್ಚಾಪುರ ಗ್ರಾಮದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್(50) ಬಂಧೀತ ಆರೋಪಿ ಆಗಿದ್ದಾನೆ. ನೀರಿಗೆ ವಿಷದ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿತ್ತು. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಂಜುನಾಥ್ ಮೇಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹಾಗೂ ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕಳ್ಳತನ ಪ್ರಕರಣವಿತ್ತು. ಕಳ್ಳತನ ಮಾಡಿ ಜೈಲಿಗೂ ಹೋಗಿ ಬಂದಿದ್ದ. ಚಿಗಟೇರಿ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಮಂಜುನಾಥ್‍ಗೆ ಅವಮಾನವಾಗಿತ್ತು. ಇದೇ ಕಾರಣಕ್ಕೆ ನೀರಿನ ಟ್ಯಾಂಕ್‍ಗೆ ವಿಷ ಹಾಕಿರುವುದಾಗಿ ಆರೋಪಿ ಮಂಜುನಾಥ್ ತಪ್ಪು ಒಪ್ಪಿಕೊಂಡಿದ್ದಾನೆ. ಈ ಪ್ರಕರಣ ಚಗಟೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:
ಆರೋಪಿ ಮಂಜುನಾಥ ಏಪ್ರಿಲ್ 9ರಂದು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್‍ಗೆ ವಿಷ ಬೆರೆಸಿದ್ದ. ಟ್ಯಾಂಕ್‍ನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದರು. ಘಟನೆ ನಡೆಯುವ ಮುನ್ನ ಆರೋಪಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಓಡಾಡುವುದನ್ನು ಸ್ಥಳೀಯರು ನೋಡಿದ್ದರಂತೆ.

ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಮಾತ್ರೆಗಳುಳ್ಳ ಬಾಟೆಲ್ ಇದಾಗಿದೆ. ಬೆಳಗ್ಗೆ ನೀರು ಸರಬರಾಜು ಮಾಡುವ ಸಿಬ್ಬಂದಿ ಟ್ಯಾಂಕ್ ಮೇಲೇರಿ ಪರಿಶೀಲಿಸಿದಾಗ ನೀರಿನಲ್ಲಿ ವಿಷದ ಬಾಟೆಲ್ ಬಿದ್ದಿರೋದು ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನೀರಿನಲ್ಲಿದ್ದ ವಿಷದ ಬಾಟೆಲ್ ಮೇಲಕ್ಕೆತ್ತಿ ಟ್ಯಾಂಕ್ ಸ್ವಚ್ಛಗೊಳಿಸಿದ್ದರು.

ಗ್ರಾಮಕ್ಕೆ ಡಿವೈಎಸ್‍ಪಿ ಹಾಲಮೂರ್ತಿರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಸಕ ಕರುಣಾಕರ್ ರೆಡ್ಡಿ ಸೂಚನೆ ನೀಡಿದ್ದರು. ಇದೀಗ ಪ್ರಕರಣದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *