ಪ್ರಣಬ್‍ರವರ ಸೇವೆ, ಸಾಧನೆಗಳು ಅನನ್ಯ – ಸಿಎಂ ಬಿಎಸ್‍ವೈ ಸಂತಾಪ

Public TV
1 Min Read

ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

ಆಗಸ್ಟ್ 10ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಪ್ರಣಬ್ ಮುಖರ್ಜಿಯವರು, ಇಂದು ಸಂಜೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನು ಅವರ ಮಗ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಹೀಗಾಗಿ ಪ್ರಣಬ್‍ರವರ ಸೇವೆ, ಸಾಧನೆಗಳು ಅನನ್ಯ ಎಂದು ಬಿಎಸ್‍ವೈ ಟ್ವೀಟ್ ಮಾಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಎಸ್‍ವೈ ಧೀಮಂತ ರಾಜಕಾರಣಿ, ಭಾರತದ ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ವಿಧಿವಶರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ನೇತಾರರನ್ನು ಕಳೆದುಕೊಂಡ ಅನಾಥಪ್ರಜ್ಞೆ ಇಡೀ ದೇಶಕ್ಕೆ ಆವರಿಸಿದೆ. ಅವರೊಂದಿಗೆ ನನ್ನ ಒಡನಾಟದ ಕ್ಷಣಗಳನ್ನು ನೆನೆಯುತ್ತಾ, ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ.

ಪ್ರಣಬ್‍ರಷ್ಟು ಸುದೀರ್ಘ ಕಾಲ ಆಡಳಿತದ ಕೇಂದ್ರ ಸ್ಥಾನದಲ್ಲಿದ್ದು, ಪ್ರಾಮಾಣಿಕವಾಗಿ, ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಮತ್ತೋರ್ವ ಸರ್ವಾದರಣೀಯ ನಾಯಕ ಇರಲಾರರು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬಿಎಸ್‍ವೈ ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಪ್ರಣಬ್ ರವರ ಸೇವೆ, ಸಾಧನೆಗಳು ಅನನ್ಯ. ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ, ವಿದೇಶಾಂಗ, ಹಣಕಾಸು, ರಕ್ಷಣಾ ಸಚಿವರಾಗಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿಗಳಾಗಿ ಅವರು ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು ಎಂದು ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *