ಪೋಷನ್ ಅಭಿಯಾನದ ಪ್ರಗತಿ ಸಭೆ ನಡೆಸಿದ ಶಶಿಕಲಾ ಜೊಲ್ಲೆ

Public TV
1 Min Read

ಬೆಂಗಳೂರು: ರಾಷ್ಟ್ರೀಯ ಪೋಷನ್ ಅಭಿಯಾನದ ಅನುದಾನದ ಬಳಕೆ ಹಾಗೂ ಸಾಧನೆಯಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಮುಂದಿನ ತ್ರೈಮಾಸಿಕ ಸಭೆಯ ವೇಳೆಗೆ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಗುರಿ ನೀಡಿದ್ದಾರೆ.

ಪೋಷನ್ ಅಭಿಯಾನದ ಪ್ರಗತಿ ಪರಿಶೀಲನೆ ಕುರಿತಂತೆ ಬಹುಮಹಡಿ ಕಟ್ಟಡದ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರ ಜೊತೆಗೆ ಶಶಿಕಲಾ ಜೊಲ್ಲೆಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಅಭಿಯಾನದ ಕುರಿತಂತೆ ಪ್ರತಿಯೊಂದು ಜಿಲ್ಲೆಗಳ ಉಪನಿರ್ದೇಶಕರ ಜೊತೆಗೆ ಮಾತನಾಡಿ ಚಟುವಟಿಕೆಗಳ ಭೌತಿಕ ಹಾಗೂ ಆರ್ಥಿಕ ಮಾಹಿತಿ ಪಡೆದರು. ಅಲ್ಲದೆ ಅಭಿಯಾನದ ಜಾರಿಗೆ ಇರುವ ಸಮಸ್ಯೆಗಳ ಕುರಿತಂತೆಯೂ ಮಾಹಿತಿ ಪಡೆದರು. ಪೋಷನ್ ಟ್ರ್ಯಾಕರ್ ಅಳವಡಿಕೆ, ಸಮುದಾಯ ಆಧಾರಿತ ಕಾರ್ಯಕ್ರಮಗಳು, ಐಎಲ್‍ಎ ತರಬೇತಿ ಕಾರ್ಯಕ್ರಮ, ಇ-ಐಎಲ್‍ಎ ಪ್ರಗತಿ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ನೀಡಿರುವ ಸ್ಮಾರ್ಟ್ ಫೋನ್ ಸಮಸ್ಯೆ ಕುರಿತು ಸಚಿವೆಯರ ಗಮನಕ್ಕೆ ತಂದರು. ನಂತರ ಪ್ರತಿಕ್ರಿಯಿಸಿದ ಸಚಿವರು, ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ ಸಂಬಂಧಪಟ್ಟ ಕಂಪನಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಇದೇ ಸಮಯದಲ್ಲಿ ಈ ಅಭಿಯಾನದ ಜಾರಿಯಲ್ಲಿ ಎರಡನೇ ಸ್ಥಾನದಲ್ಲಿರುವುದಕ್ಕೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ಸಭೆಯ ವೇಳೆಗೆ ದೇಶದಲ್ಲಿ ಈ ಅಭಿಯಾನ ಜಾರಿಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗೆಳಿಗೆ ಗುರಿ ನೀಡಿದರು. ಸರ್ಕಾರದ ಯೋಜನೆ ಜಾರಿಯಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *