ಪೋಷಕರ ಎದುರೇ 24 ಗಂಟೆಯಲ್ಲಿ ಯುವತಿ ಎರಡು ಮದ್ವೆ- ಕೊನೆಗೂ ಪ್ರೀತಿಗೆ ಜಯ

Public TV
2 Min Read

– ಪತಿಯ ಮನೆಗೆ ಹೋಗುವ ಕೊನೆ ಕ್ಷಣದಲ್ಲಿ ಟ್ವಿಸ್ಟ್
– ಪೋಷಕರಿಂದಲೇ ಮೊದಲ ವಿವಾಹ ರದ್ದು

ಹೈದರಾಬಾದ್: ಕೊರೊನಾ ಲಾಕ್‍ಡೌನ್ ನಡುವೆಯೂ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಯುವತಿಯೊಬ್ಬಳು 24 ಗಂಟೆಯಲ್ಲಿ ಎರಡು ಮದುವೆಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ನಲ್ಗೊಂಡ ಜಿಲ್ಲೆಯ ಕನಗಲ್ ಪ್ರದೇಶದಲ್ಲಿ ನಡೆದಿದೆ. ಶಾಬ್ದುಲ್ಲಾಪುರ ಗ್ರಾಮದ ಮೋನಿಕಾ 24 ಗಂಟೆಯಲ್ಲಿ ಪೋಷಕರ ಮುಂದೆಯೇ ಎರಡು ಮದುವೆಯಾಗಿದ್ದಾಳೆ. ಆದರೆ ಎರಡನೇ ಮದುವೆಯ ಮೂಲಕ ಆಕೆಯ ಪ್ರೀತಿಗೆ ಜಯ ಸಿಕ್ಕಿದೆ.

ನಡೆದಿದ್ದೇನು?
ಮೋನಿಕಾ ಕುಟುಂಬ ಕಳೆದ ಹತ್ತು ವರ್ಷಗಳಿಂದ ಕುರಂಪಲ್ಲಿನಲ್ಲಿ ನೆಲೆಸಿದೆ. ಮೋನಿಕಾ ವಿದ್ಯಾಭ್ಯಾಸ ಮುಗಿಸಿದ ನಂತರ ಪೋಷಕರು ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ಕೊನೆಗೆ ದೇವರಕೊಂಡ ಗ್ರಾಮದ ಯುವಕನೊಂದಿಗೆ ಮೋನಿಕಾಳ ಮದುವೆಯನ್ನು ಪೋಷಕರು ನಿಗದಿ ಮಾಡಿದ್ದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹತ್ತಿರ ಸಂಬಂಧಿಗಳು ಮತ್ತು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆದಿದೆ.

ವಿವಾಹವಾದ ಬಳಿಕ ಮೋನಿಕಾ ಪತಿಯ ಮನೆಗೆ ಹೋಗಲು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಿದ್ದಳು. ಇತ್ತ ಮದುವೆಯಾದ ಸ್ವಲ್ಪ ಸಮಯದ ನಂತರ ಮೋನಿಕಾಳ ಗೆಳೆಯ ರಾಜೇಶ್ ಬಂದಿದ್ದಾನೆ. ಅವನನ್ನು ನೋಡಿದ ತಕ್ಷಣ ಓಡಿ ಹೋಗಿ ತಬ್ಬಿಕೊಂಡು ಕಣ್ಣೀರು ಹಾಕಿದ್ದಾಳೆ. ಇದನ್ನು ನೋಡಿ ಕೋಪಗೊಂಡ ವರ ನನಗೆ ಮೋಸ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ರಾಜೇಶ್ ಸಂಬಂಧದಲ್ಲಿ ಮೋನಿಕಾಳಿಗೆ ಮಾವ ಆಗಬೇಕು. ಇವರಿಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮೋನಿಕಾ ಹೆದರಿಕೊಂಡು ತನ್ನ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿರಲಿಲ್ಲ. ಇತ್ತ ಮದುಮಗನ ದೂರಿನ ಮೇರೆಗೆ ಎರಡು ಕುಟುಂಬಗಳ ಹಿರಿಯರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ನಂತರ ಪೊಲೀಸರು ಎಲ್ಲರೂ ಕುಳಿತುಕೊಂಡು ಒಂದು ಬಾರಿ ಮಾತನಾಡಿ ಎಂದು ಹೇಳಿದ್ದಾರೆ.

ಅದರಂತೆಯೇ ಗ್ರಾಮದಲ್ಲಿ ಈ ಬಗ್ಗೆ ಪಂಚಾಯಿತಿ ಮಾಡಿದ್ದಾರೆ. ಕೊನೆಗೆ ಎಲ್ಲರೂ ತೀರ್ಮಾನ ಮಾಡಿ ಹಿರಿಯರು ಮತ್ತು ಪೋಷಕರು ನಡೆದಿದ್ದ ಮದುವೆಯನ್ನು ರದ್ದು ಮಾಡಿದ್ದಾರೆ. ಇದೇ ವೇಳೆ ರಾಜೇಶ್ ಜೊತೆ ಮೋನಿಕಾಳ ವಿವಾಹವನ್ನು ಏರ್ಪಡಿಸಿದ್ದಾರೆ. ಅಂತಿಮವಾಗಿ ಮೋನಿಕಾ ತಾನು ಪ್ರೀತಿಸಿದ ಹುಡುಗನ ಜೊತೆ ಪೋಷಕರ ಮುಂದೆಯೇ ಮತ್ತೆ ಮದುವೆಯಾಗಿದ್ದಾಳೆ. ಎರಡು ಕುಟುಂಬದವರು, ಹಿರಿಯರು ಮತ್ತು ಗ್ರಾಮಸ್ಥರು ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *