ಪೊಲೀಸರ ಬೆನ್ನು ಬಿಡದೆ ಕಾಡುತ್ತಿದೆ ಕೊರೊನಾ- ಕಳ್ಳರು ಸಿಕ್ಕರೂ ಠಾಣೆಗೆ ಕರೆದುಕೊಂಡು ಬರಲು ಭಯ

Public TV
1 Min Read

ಹುಬ್ಬಳ್ಳಿ: ಜಿಲ್ಲೆಯ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಪೊಲೀಸರಿಗೆ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಭಾನುವಾರ ಒಂದೇ ದಿನ ಅವಳಿನಗರದ ವಿವಿಧ ಪೊಲೀಸ್ ಠಾಣೆಯ 10 ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ.

ಘಂಟಿಕೇರಿ ಪೊಲೀಸ್ ಠಾಣೆಯ ಎಎಸ್‍ಐ ಹೆಡ್ ಕಾನ್ಸ್ ಸ್ಟೇಬಲ್, ಇಬ್ಬರು ಪೇದೆಗಳು ಹಾಗೂ ಹೋಂ ಗಾರ್ಡಿಗೆ ಸೋಂಕು ತಗುಲಿದೆ. ಉಪನಗರ ಪೊಲೀಸ್ ಠಾಣೆಯ ಮತ್ತಿಬ್ಬರು ಸಿಬ್ಬಂದಿಗೂ ಸೋಂಕು ಇರೋದು ದೃಢವಾಗಿದೆ. ಅಲ್ಲದೇ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೂ ಸೋಂಕು ಆವರಿಸಿದ್ದು, ಎಲ್ಲಾ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಪನಗರ ಪೊಲೀಸರು ಕಳ್ಳನನ್ನು ಹಿಡಿದ ಬಳಿಕ ಕಳ್ಳನಿಂದ ಪೊಲೀಸರಿಗೆ ಸೋಂಕು ತಗುಲಿತ್ತು. ನಂತರ ಅವಳಿ ನಗರ ವಿವಿಧ ಠಾಣೆಗಳ ಸಿಬ್ಬಂದಿಗಳಲ್ಲೂ ಸೋಂಕು ಹರಡಿದೆ. ಈಗಾಗಲೇ ಉಪನಗರ ಠಾಣೆಯ ಐವರು ಸಿಬ್ಬಂದಿ, ಬೆಂಡಿಗೇರಿ, ಅಶೋಕನಗರ, ಘಂಟಿಕೇರಿ, ಉಪನಗರ, ಶಹರ ಠಾಣೆ ಸೇರಿದಂತೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೂ ಸೋಕು ಆವರಿಸಿದೆ.

ವಿವಿಧ ಠಾಣೆಗಳ ಸಿಬ್ಬಂದಿಗೆ ಸೋಂಕು ದೃಢವಾದ ನಂತರ ಪೊಲೀಸರು ಕಳ್ಳರನ್ನು ಹಿಡಿಯಲು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕಳ್ಳರಿಗೆ ಕೊರೊನಾ ಹೇಗೆ ಬಂತು ಎಂಬುದು ಸಹ ತಿಳಿಯದಂತಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ಆರೋಪಿಗೆ ಕೊರೊನಾ ದೃಢಪಟ್ಟಿತ್ತು. ಜೊತೆಗೆ ಉಪನಗರ ಠಾಣೆಯಲ್ಲಿ ಕಳ್ಳನೊಬ್ಬನಿಗೆ ಕೊರೊನಾ ಕಾಣಿಸಿಕೊಂಡಿತ್ತು. ಅಶೋಕ ನಗರ ಠಾಣೆಯಲ್ಲಿ ವಿಧವಾ ಮಹಿಳೆಗೆ ವಂಚಿಸಿದ ಆರೋಪಿಗೆ ಸೋಂಕು ದೃಢಪಟ್ಟಿತ್ತು. ಸದ್ಯ ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದ ಇಬ್ಬರು ಕಳ್ಳರಲ್ಲಿ ಒಬ್ಬರಿಗೆ ಕೊರೊನಾ ಧೃಡಪಟ್ಟಿದ್ದು, ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಆರೋಪಿಗಳನ್ನು ಬಂಧಿಸಿ ಕರೆತಂದ ವೇಳೆ ಪೊಲೀಸರಿಗೆ ಸೋಂಕು ತಗುಲುತ್ತಿರುವುದು ಪೊಲೀಸರು ಹಾಗೂ ಅವರ ಕುಟುಂಬದವರಲ್ಲಿ ಆತಂಕ ಹೆಚ್ಚಳ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *