ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಕಾರಣವಲ್ಲ, ಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಲಕ್ಷ್ಮಣ ಸವದಿ

Public TV
1 Min Read

ಬೆಳಗಾವಿ: ತೈಲ ಬೆಲೆ ಏರಿಕೆ ಪಂಚರಾಜ್ಯ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ, ದೇಶದಲ್ಲಿನ ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೇ ತೈಲ ಬೆಲೆ ಏರಿಕೆಯಾಗಿದೆ. ಇದರಿಂದ ದೇಶದಲ್ಲೂ ಇಂಧನ ಬೆಲೆ ಹೆಚ್ಚಳವಾಗಿದೆ. ತೈಲ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಂತೆ ತೈಲ ಬೆಲೆ ಏರಿಕೆ, ಇಳಿಕೆ ಆಗುತ್ತದೆ. ತೈಲ ಬೆಲೆ ಏರಿಕೆ ಪರಿಣಾಮ ಕೇವಲ ಒಂದೇ ರಾಜ್ಯದ ಮೇಲಾಗಿಲ್ಲ. ದೇಶದ ಎಲ್ಲ ರಾಜ್ಯಗಳ ಜನರ ಮೇಲೂ ಪರಿಣಾಮ ಬೀರಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಜನರಿಗೆ ನಂಬಿಕೆ ಇದೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಜನರು ಮತ ನೀಡುತ್ತಾರೆ. ತೈಲ ಬೆಲೆ ಏರಿಕೆಯಿಂದ ಪಂಚರಾಜ್ಯ ಹಾಗೂ ರಾಜ್ಯದ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಪಕ್ಷದ ಮೇಲೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಕಲ್ಯಾಣ ಉಪಚುನಾವಣೆ ಉಸ್ತುವಾರಿ ನನಗೆ ನೀಡಲಾಗಿದೆ. ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಅವರಿಗೂ ಜವಾಬ್ದಾರಿ ನೀಡಲಾಗಿದೆ. ಅಭ್ಯರ್ಥಿ ಯಾರೇ ಆಗಲಿ, ಅಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಸವಕಲ್ಯಾಣ ಜೊತೆ ಮಸ್ಕಿ, ಸಿಂದಗಿ, ಬೆಳಗಾವಿಯಲ್ಲೂ ಪ್ರಚಾರ ಮಾಡುತ್ತೇನೆ. ನಾನು ಪರಿಷತ್ ಸದಸ್ಯನಿದ್ದೇನೆ, ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಪುತ್ರನೂ ಸಿಂದಗಿಯಿಂದ ಸ್ಪರ್ಧಿಸುವುದಿಲ್ಲ, ಈ ಬಗ್ಗೆ ಆತನೂ ಸ್ಪಷ್ಟನೆ ನೀಡಿದ್ದಾರೆ. ಅಭಿಮಾನಿಗಳು ಆ ರೀತಿ ಹೇಳುತ್ತಿದ್ದಾರೆ, ಆದರೆ ನಾವು ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *