ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ – ದರ ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು?

Public TV
2 Min Read

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಿದ್ದು, ಇಂದು ಸಹ ಏರಿಕೆಯಾಗಿದೆ. ಇಂದು ಪೆಟ್ರೋಲ್‌ ಬೆಲೆ 70 ಪೈಸೆ ಏರಿಕೆ ಆಗಿದ್ದರೆ ಡೀಸೆಲ್‌ ಬೆಲೆ 27 ಪೈಸೆ ಏರಿಕೆಯಾಗಿದೆ.

ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 90.53 ಆಗಿದ್ದರೆ ಡೀಸೆಲ್‌ ಬೆಲೆ 82.40 ರೂ. ಆಗಿದೆ.

ಒಂದು ಲೀಟರ್‌ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 87.60 ರೂ. ಇದ್ದರೆ ಡೀಸೆಲ್‌ ಬೆಲೆ 77.73 ರೂ. ಇದೆ. ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.12 ರೂ. ಇದ್ದರೆ ಡೀಸೆಲ್‌ ಬೆಲೆ 84.63 ರೂ. ಇದೆ.

ಸೋಮವಾರ ಬ್ರೆಂಟ್‌ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 60 ಡಾಲರ್‌(ಅಂದಾಜು 4,300 ರೂ.) ತಲುಪಿತ್ತು.  ಈ ದರ ಈ ವರ್ಷದ ಗರಿಷ್ಠವಾಗಿದ್ದು, ಬೆಲೆ ಹೆಚ್ಚಳ ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.

ಬೆಲೆ ಏರಿಕೆ ಯಾಕೆ?
ದೇಶದ ಕಚ್ಚಾ ತೈಲ ಬೇಡಿಕೆಯ ಶೇ.84ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೋವಿಡ್–19 ಲಾಕ್‌ಡೌನ್ ಘೋಷಣೆಯಾದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 2 ತಿಂಗಳ ಕಾಲ ದರ ಪರಿಷ್ಕರಣೆ ನಿಲ್ಲಿಸಿತ್ತು.

ಕೋವಿಡ್‌ ಲಸಿಕೆ ಲಭ್ಯತೆ ಮತ್ತು ಕೋವಿಡ್‌ 19 ಸೋಂಕಿತರ ಸಂಖ್ಯೆ ಇಳಿಕೆ ಆಗುತ್ತಿದ್ದಂತೆ ವಿಶ್ವದೆಲ್ಲೆಡೆ ಆರ್ಥಿಕ ಚಟುವಟಿಕೆಗೆಗಳು ಮತ್ತೆ ಆರಂಭವಾಗಿದೆ. 2019ರ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 66 ಡಾಲರ್( ಅಂದಾಜು 4,800) ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಲಾಕ್‌ಡೌನ್, ಸಂಚಾರ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ 2020ರ ಏಪ್ರಿಲ್‌ ವೇಳೆಗೆ 19 ಡಾಲರ್‌(ಅಂದಾಜು 1,300 ರೂ.)ಗೆ ಇಳಿಕೆ ಕಂಡಿತ್ತು.

ಕೋವಿಡ್‌ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್‌ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್‌ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.

ಅಮೆರಿಕದ ಟ್ರಂಪ್‌ ಆಡಳಿತ ಇರಾನ್ ಮೇಲೆ ತೈಲ ಖರೀದಿ ಮತ್ತು ವ್ಯಾಪಾರ ಸಂಬಂಧ ನಿರ್ಬಂಧ ಹೇರಿತ್ತು. ಆದರೆ ಹೊಸದಾಗಿ ಅಧ್ಯಕ್ಷರಾಗಿರುವ ಜೋ ಬೈಡನ್‌ ಸರ್ಕಾರ ಇರಾನ್‌ ಮೇಲಿನ ನಿರ್ಬಂಧ ತೆಗೆದು ಹಾಕಿದರೆ ತೈಲ ಉತ್ಪಾದನೆ ಹೆಚ್ಚಾಗಿ ದರ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *