ಪುಲ್ವಾಮಾದಲ್ಲಿ ಗುಂಡಿನ ಚಕಮಕಿ- ಒಬ್ಬ ಭಯೋತ್ಪಾದಕನ ವಧೆ, ಯೋಧ ಹುತಾತ್ಮ

Public TV
1 Min Read

ಶ್ರೀನಗರ: ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿ ವೇಳೆ ಓರ್ವ ಭಯೋತ್ಪಾದಕನನ್ನು ಸೇನೆ ಸೆದೆಬಡಿದಿದ್ದು, ಇದೇ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಪುಲ್ವಾಮಾದ ಗೂಸು ಗ್ರಾಮದಲ್ಲಿ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆದಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಗುಂಡಿನ ಚಕಮಕಿ ವೇಳೆ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿ ಲಭಿಸಬೇಕಿದೆ ಎಂದು ಕಾಶ್ಮೀರ ವಲಯದ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮನೆಯೊಂದರಲ್ಲಿ ಭಯೋತ್ಪಾದಕರ ಗುಂಪು ಅಡಗಿಕೊಂಡಿದೆ ಎಂಬ ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ ಸೋಮವಾರ ರಾತ್ರಿಯೇ ಭದ್ರತಾ ಪಡೆ ಗ್ರಾಮವನ್ನು ಸುತ್ತುವರಿದಿತ್ತು. ನಂತರ ಮನೆ, ಮನೆಯ ಪರಿಶೀಲನಾ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಭಯೋತ್ಪಾದಕರ ಗುಂಪು ಗುಂಡು ಹಾರಿಸಲಾರಂಭಿಸಿತು. ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್ ಅಧಿಕಾರಿ ಹಾಗೂ ಓರ್ವ ಯೋಧ ಗಾಯಗೊಂಡಿದ್ದರು. ಆದರೆ ತೀವ್ರ ಗಾಯಗಳಾಗಿದ್ದರಿಂದ ಯೋಧ ಹುತಾತ್ಮರಾಗಿದ್ದಾರೆ. ಪೊಲೀಸ್ ಅಧಿಕಾರಿಗೂ ತೀವ್ರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆ ವೇಳೆ ಮೂವರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದು, ಇವರು ಜೈಷ್-ಇ-ಮೊಹಮ್ಮದ್ ಸಂಘಟನೆಗೆ ಸೇರಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆ ಕೈಗೊಂಡ ಕಾರ್ಯಾಚರಣೆಗಳ ಸರಣಿಯಲ್ಲಿ ಇದು ಇತ್ತೀಚಿನದು. ಭದ್ರತಾ ಪಡೆಗಳ ಕಾರ್ಯಾಚರಣೆಯಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಈ ವರ್ಷ 122 ಜನ ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ ತಿಂಗಳು 22 ಭಯೋತ್ಪಾದಕರನ್ನು ಸೇನೆ ಬೇಟೆಯಾಡಿದೆ.

Share This Article
Leave a Comment

Leave a Reply

Your email address will not be published. Required fields are marked *