ಬೆಳಗಾವಿ: ಪೀರನವಾಡಿಯಲ್ಲಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ಕಿತ್ತಾಟ ನಡೆಸಿದ್ದ ಎರಡು ಗುಂಪುಗಳ ಮೇಲೆ ಪೊಲೀಸರು ಲಾಠಿಜಾರ್ಜ್ ನಡೆಸಿದ್ದಾರೆ.
ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯನ್ನು ಖಂಡಿಸಿ ಇಂದು ಅಲ್ಲಿದ್ದ ಎಂಇಎಸ್ ಪುಂಡರು ಶಿವಾಜಿ ಪ್ರತಿಮೆ ಸ್ಥಾಪನೆ ಮುಂದಾಗಿದ್ದರು. ಈ ವೇಳೆ ಅಲ್ಲಿದ್ದ ಜನತೆ ತಡೆದಿದ್ದರು. ಎರಡು ಕಡೆ ಜನರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಎರಡು ಗುಂಪುಗಳ ಜನ ಹೆಚ್ಚು ಸೇರುತ್ತಿದ್ದತೆ ಎಚ್ಚೆತ್ತ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ರಾತ್ರಿ ಏನಾಗಿತ್ತು?
ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.
ನಿನ್ನೆ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಹಮ್ಮಿಕೊಂಡಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಕುರುಬರ ಸಂಘ ಮತ್ತು ಕನ್ನಡ ಸಂಘಟನೆಯ ನೂರಾರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ನಾಳೆ ಸಚಿವ ಈಶ್ವರಪ್ಪ ಜೊತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥ ಮಾಡುತ್ತೇನೆ ಎಂದಿದ್ದರು.
ಇತ್ತ ರಾತ್ರೋರಾತ್ರಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಮೂರ್ತಿ ಪ್ರತಿಷ್ಠಾಪನೆ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಶಿವಾಜಿ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಶಿವಾಜಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೇ ಶಿವಾಜಿ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಲು ಬಂದ ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರ ಹಾಗೂ ಮರಾಠಿ ಭಾಷಿಕರ ನಡುವೆ ವಾಗ್ವಾದ ನಡೆದಿತ್ತು.