ನವದೆಹಲಿ: ಅತ್ತೆ ಮನೆಯವರಿಗೆ ಅಳಿಯ ಮೋಸದಿಂದ ಊಟದಲ್ಲಿ ಭಯಾನಕ ವಿಷ ತಿನ್ನಿಸಿ ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ವರುಣ್ ಅರೋರಾ (37) ಎಂದು ಗುರುತಿಸಲಾಗಿದೆ. ಅತ್ತೆ ಅನಿತಾ(57) ಹಾಗೂ ನಾದಿನಿ ಪ್ರಿಯಾಂಕ ಮೃತರು. ಅಳಿಯ ಕೊಟ್ಟ ವಿಷಕ್ಕೆ ಅತ್ತೆಮ ನಾದಿನಿ ಸಾವನ್ನಪಿದ್ದಾರೆ. ಅಪ್ಪ, ಮಗಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ತನ್ನ ರಾಜಕೀಯ ವೈರಿಗಳನ್ನು ಕೊಲೆ ಮಾಡಲು ವಿಷಕಾರಿ ಪದಾರ್ಥಗಳನ್ನು ತಿನ್ನಿಸುತ್ತಿದ್ದ. ಇದನ್ನು ಸೇವಿಸಿ ದಿನದಿಂದ ದಿನಕ್ಕೆ ವಿಚಿತ್ರ ಕಾಯಿಲೆಗೆ ಒಳಗಾಗಿ ಸಾಯುತ್ತಿದ್ದರು. ಇಂಥದ್ದೇ ಒಂದು ಉಪಾಯವನ್ನು ಮಾಡಿ ವರುಣ್ ತನ್ನ ಅತ್ತೆ ಮತ್ತು ನಾದಿನಿಯನ್ನು ಕೊಲೆ ಮಾಡಿದ್ದಾನೆ.
ವರುಣ್‍ಗೆ ಅತ್ತೆ ಮನೆಯಲ್ಲಿ ಅತ್ತೆ, ಮಾವ, ನಾದಿನಿ ಸೇರಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದ ವರುಣ್ ಜ,29 ರಂದು ಫಿಶ್ ಕರಿಯಲ್ಲಿ ವಿಷವನ್ನು ಬೆರೆಸಿದ್ದಾನೆ. ಅದನ್ನು ತಿಂದ ಕುಟುಂಬದವರು ಮೂರನೇ ದಿನ ತಲೆ ಸುತ್ತು, ಕೈಕಾಲು ಸೆಳೆತ, ಕೂದಲು ಊದುರುವಿಕೆ ಎಂದು ಆಸ್ಪತ್ರೆ ಸೇರಿದ್ದಾರೆ. ಫೆ.15 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೇ ವಿಷಕಾರಿ ಆಹಾರವನ್ನು ಸೇವಿಸಿದ್ದ ವರುಣ್ ಪತ್ನಿ ದಿವ್ಯಾ ಹಾಗೂ ಮಾವ ದೇವೆಂದ್ರ ಮೋಹನ್ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.
ವಿಷ ಸೇವಿಸಿದ ಮೂವರ ವೈದ್ಯಕೀಯ ಪರೀಕ್ಷೆಗಳ ವರದಿಯನ್ನು ನೋಡಿದಾಗ ಅನುಮಾನ ಬಂದು ವರುಣ್‍ನನ್ನು ವಿಚಾರಣೆ ಮಾಡಿದ್ದೆವು. ಆಗ ವರುಣ್ ಆಹಾರದಲ್ಲಿ ವಿಷ ಇಟ್ಟು ಕೊಂದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆತನೂ ತಾನೇ ವಿಷ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.