ಪಿಪಿಇ ಕಿಟ್ ಧರಿಸಿ ಮಕ್ಕಳ ರಕ್ಷಣೆಗೆ ನಿಂತ ಉತ್ತರ ಕನ್ನಡ ಪೊಲೀಸರು!

Public TV
1 Min Read

ಕಾರವಾರ: ಯಾವುದೇ ಗಲಾಟೆ ಇರಲಿ, ರಕ್ಷಣೆ ಇರಲಿ ಎಲ್ಲದಕ್ಕೂ ಪೊಲೀಸರು ಬೇಕೇ ಬೇಕು. ಸಮಾಜದಲ್ಲಿ ನೆಮ್ಮದಿ ನೆಲೆಸಲು ಪೊಲೀಸರು ತಮ್ಮ ಖಾಸಗಿ ಜೀವನವನ್ನು ಬದಿಗೊತ್ತಿ ಜನರ ಶಾಂತಿಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾರೆ. ಕೊರೊನಾ ಬಂದ ನಂತರ ಪೊಲೀಸರ ಕಾರ್ಯ ವೈಖರಿ ಎಲ್ಲರೂ ಮೆಚ್ಚುವಂತದ್ದು. ಕೆಲಸದ ಸಂದರ್ಭದಲ್ಲಿ ಪೊಲೀಸರು ಕೂಡ ಕೊರೊನಾ ಮಾರಿಗೆ ತುತ್ತಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಡಿ.ಆರ್ ಪೊಲೀಸ್ ಸಿಬ್ಬಂದಿಗೆ ಕೊರೊನಾ ವಕ್ಕರಿಸಿತ್ತು. ಕಂಟೈನ್ಮೆಂಟ್ ಝೋನ್, ಕೋವಿಡ್ ವಾರ್ಡ್ ಎನ್ನದೇ ಎಲ್ಲಾ ಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಪೊಲೀಸರಿಗೆ ಈಗ ಎಸ್‍ಎಸ್‍ಎಲ್‍ಸಿ ಪರಿಕ್ಷಾ ಕೇಂದ್ರದ ಬಂದೋಬಸ್ತ್ ಜವಬ್ದಾರಿ ಕೂಡ ಹೆಗಲಿಗೇರಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 156ಕ್ಕೆ ಜಿಗಿತ ಕಂಡಿದೆ. ಹೀಗಾಗಿ ಮಕ್ಕಳ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಯ ಹಿತದೃಷ್ಟಿಯಿಂದ ಕಾರವಾರದ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ರವರು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಸೂಕ್ಷ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗಾಗಿ ಎಸ್.ಜಿ.ಆರ್ ಫಂಡ್ ನಲ್ಲಿ 260 ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಿ ಸಿಬ್ಬಂದಿಗೆ ನೀಡಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲೆಯ 72 ಕೇಂದ್ರಗಳಿಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಿದ್ದು ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಕ್ಕಳಿಗೆ ಕೊರೊನಾ ಹರಡದಂತೆ ಪೊಲೀಸ್ ಇಲಾಖೆ ಜಾಗೃತಿ ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಎರಡು ಶೈಕ್ಷಣಿಕ ಜಿಲ್ಲೆಯಿದ್ದು 20,150 ವಿದ್ಯಾರ್ಥಿಗಳು ಇಂದಿನಿಂದ ಪರೀಕ್ಷೆ ಬರೆಯುತ್ತಿದ್ದಾರೆ. 72 ಪರೀಕ್ಷಾ ಕೇಂದ್ರದಲ್ಲಿ 100 ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷಾ ಕೆಂದ್ರದಲ್ಲಿ ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸುತ್ತಿದ್ದು ಪರೀಕ್ಷೆ ಪ್ರಾರಂಭದಲ್ಲಿ ಹಾಗೂ ಮುಗಿದ ನಂತರ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ತಮ್ಮಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದೆಂಬ ಕಾಳಜಿ ಪೊಲೀಸ್ ಇಲಾಖೆಯದ್ದಾಗಿದ್ದು ಎಲ್ಲರಿಗೂ ಮಾದರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *