ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್‍ನಲ್ಲಿ ಸಂಚಾರ- ಸೋಂಕಿತರ ಜೊತೆ ಸಂವಾದ ನಡೆಸಿದ ಡಿಸಿಎಂ

Public TV
3 Min Read

– ಜಿಲ್ಲೆಯಲ್ಲಿ ಐಸಿಯು ಹಾಸಿಗೆ ಹೆಚ್ಚಳ
– ಎಲ್ಲ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಘಟಕ

ಮಂಡ್ಯ: ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಗುರುವಾರ ಬೆಳಗಿನಿಂದ ಮಧ್ಯಾಹ್ನದವರೆಗೆ ಜಿಲ್ಲೆಯಲ್ಲಿ ಕೋವಿಡ್ ವ್ಯವಸ್ಥೆ ವೀಕ್ಷಿಸಲು ಬಿರುಸಿನ ಪ್ರವಾಸ ನಡೆಸಿದರು. ಅಲ್ಲದೆ ಮದ್ದೂರು, ಬೂದನೂರು ಹಾಗೂ ಮಂಡ್ಯ ಆಸ್ಪತ್ರೆಗಳಿಗೆ ಭೇಟಿ ವ್ಯಾಪಕ ಪರಿಶೀಲನೆ ನಡೆಸಿದರು.

ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರ ವಾರ್ಡ್‍ಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರು. ಸೋಂಕಿತರ ಯೋಗ ಕ್ಷೇಮ ವಿಚಾರಿಸಿ, ಚಿಕಿತ್ಸೆ-ಆರೈಕೆಯ ಬಗ್ಗೆ ಮಾಹಿತಿ ಪಡೆದರು.

ಆಮ್ಲಜನಕದ ವ್ಯವಸ್ಥೆ, ಚಿಕಿತ್ಸೆ ವಿಧಾನ, ಮೂಲಸೌಕರ್ಯ ಮುಂತಾದವುಗಳನ್ನು ವೀಕ್ಷಿಸಿದರು. ವಾರ್ಡ್‍ನಲ್ಲಿ ಸೋಂಕಿತರ ಅಟೆಂಡರ್‍ಗಳು ಇದ್ದಿದ್ದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ, ಯಾವುದೇ ಕಾರಣಕ್ಕೂ ಸೋಂಕಿತರಲ್ಲದವರನ್ನು ವಾರ್ಡ್‍ಗೆ ಬಿಟ್ಟುಕೊಳ್ಳಬಾರದು ಎಂದು ಜಿಲ್ಲಾ ವೈದ್ಯಾಧಿಕಾರಿಗೆ ತಾಕೀತು ಮಾಡಿದರು.

ಸೋಂಕಿತರ ಕೇಸ್ ಶೀಟ್‍ಗಳನ್ನೂ ಗಮನಿಸಿ, ಔಷಧೋಪಚಾರದ ಬಗ್ಗೆಯೂ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸೋಂಕಿತರನ್ನು ಮಾತನಾಡಿಸಿದ ಅವರು, ಧೈರ್ಯದಿಂದ ಇರಿ, ಬೇಗ ಗುಣಮುಖರಾಗುತ್ತೀರಿ. ವೈದ್ಯರು ಹೇಳಿದಂತೆ ಕೇಳಿ ಎಂದು ಆತ್ಮಸ್ಥೈರ್ಯ ತುಂಬಿದರು.

ಮದ್ದೂರಿನಿಂದ ಪ್ರವಾಸ ಆರಂಭಿಸಿದ ಡಿಸಿಎಂ, ಆಸ್ಪತ್ರೆಗೆ ಬರುತ್ತಿದ್ದಂತೆಯೇ, ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು ಕಿಟಕಿಗಳ ಮೂಲಕವೇ ಕಾಣಿಸಿಕೊಂಡು ಡಿಸಿಎಂಗೆ ಅಭಿವಂದನೆ ಸಲ್ಲಿಸಿದರು. ನಮಸ್ಕಾರ ಅಶ್ವತ್ಥನಾರಾಯಣ್ ಸರ್ ಎಂದು ಕೂಗಿದರು. ಈ ವೇಳೆ ಕೊಂಚ ಹತ್ತಿರಕ್ಕೆ ಹೋದ ಡಿಸಿಎಂ, ಎಲ್ಲರೂ ಕ್ಷೇಮವಾಗಿದ್ದೀರಾ? ಒಳ್ಳೆಯ ಚಿಕಿತ್ಸೆ, ಆಹಾರ ಸಿಗುತ್ತಿದೆಯಾ ಎಂದು ಆಪ್ತವಾಗಿ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಸೋಂಕಿತರು, ಎಲ್ಲವೂ ಚೆನ್ನಾಗಿದೆ ಎಂದು ಉತ್ತರಿಸಿದರು. ಅಲ್ಲಿಯೂ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ, ಸೋಂಕಿತರಿಗೆ ಯಾವುದೇ ಕೊರತೆ ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೂದನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಕೊರತೆ ಇರುವುದನ್ನು ಕಂಡ ಡಿಸಿಎಂ, ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಇರುವ ಎಲ್ಲ ಸಿಬ್ಬಂದಿಯನ್ನೂ ತಕ್ಷಣವೇ ನೇಮಕ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಸೂಚನೆ ನೀಡಿದರು.

ಐಸಿಯು ಬೆಡ್‍ಗಳ ಹೆಚ್ಚಳ
ಪ್ರವಾಸದ ಕೊನೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವಥ್ ನಾರಾಯಣ್, ಐಸಿಯು ಹಾಸಿಗೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗುವುದು. ದಿನಕ್ಕೆ 18 ಕೆಎಲ್ ಆಮ್ಲಜನಕವನ್ನು ಒದಗಿಸುವ ಉದ್ದೇಶದಿಂದ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಮತ್ತು ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮನ್ಮುಲ್ ಸಂಸ್ಥೆ ಮುಂದೆ ಬಂದಿದೆ ಎಂದರು.

ಜಿಲ್ಲೆಯಲ್ಲಿ ಈಗ ನಾಲ್ಕು ಕೋವಿಡ್ ಕೇರ್ ಸೆಂಟರ್‍ಗಳಿದ್ದು, ಇದರ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ಪ್ರದೇಶ ಹಾಗೂ ಮಂಡ್ಯದ ಕೊಳೆಗೇರಿಗಳಲ್ಲಿ ಪತ್ತೆಯಾಗುವ ಸೋಂಕಿತರಿಗೆ ಹೋಮ್ ಐಸೋಲೇಷನ್ ಇರುವುದಿಲ್ಲ. ಅವರೆಲ್ಲರನ್ನೂ ಕೋವಿಡ್ ಕೇರ್‍ಗಳಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ಕೊಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಅತ್ಯುತ್ತಮವಾಗಿದೆ. ಶೇ.95ರಷ್ಟು ಸೋಂಕಿತರನ್ನು ಮನೆ ಮನೆಗೆ ಭೇಟಿ ನೀಡಿ ಪತ್ತೆ ಹಚ್ಚಲಾಗಿದೆ. ಟೆಲಿ ಟ್ರಾಯಾಜಿಂಗ್ ಚೆನ್ನಾಗಿ ಆಗುತ್ತಿದೆ. 24 ಗಂಟೆಗೂ ಮೊದಲೇ ಪರೀಕ್ಷೆ ರಿಪೋರ್ಟ್ ಬರುತ್ತಿದೆ ಎಂದ ಡಿಸಿಎಂ, ಜಿಲ್ಲಾಡಳಿತ ಇನ್ನೂ ಉತ್ತಮವಾಗಿ ಕೆಲಸ ಮಾಡಿ ಗ್ರಾಮ ಮತ್ತು ಪಂಚಾಯಿತಿಗಳನ್ನು ಕೊರೊನಾ ಮುಕ್ತ ಮಾಡಬೇಕು ಎಂದು ಸಲಹೆ ನೀಡಿದರು.

ಡಿಸೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ
2021ರ ಕೊನೆ ವೇಳೆಗೆ ರಾಜ್ಯದ ಪ್ರತಿ ನಾಗರಿಕರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮ ವಹಿಸಿದೆ. 45 ವರ್ಷಕ್ಕೂ ಮೇಲ್ಪಟ್ಟ ಎಲ್ಲರಿಗೂ 2ನೇ ಡೋಸ್ ಲಸಿಕೆ ಕೊಡಲಾಗುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಲಸಿಕೆ ಕೊರತೆ ಉಂಟಾಗಂತೆ ಎಚ್ಚರ ವಹಿಸಲಾಗಿದೆ. ಮೂಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಯಾರಿಗೂ ಕೊರತೆ ಆಗುತ್ತಿಲ್ಲ. ಲಸಿಕೆ ಉತ್ಪಾದನೆಯನ್ನು ತಿಂಗಳಿಂದ ತಿಂಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ 1,250 ಕೋಟಿ ರೂ. ಪ್ಯಾಕೇಜ್ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ. ಎಲ್ಲ ವರ್ಗದವರನ್ನು ಒಳಗೊಂಡಂತೆ ಪ್ಯಾಕೇಜ್ ರೂಪಿಸಲಾಗಿದೆ. ಯಾರಾದರೂ ತಪ್ಪಿ ಹೋಗಿದ್ದರೆ ಅವರನ್ನೂ ಸೇರಿಸಲು ಪ್ರಯತ್ನಿಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಅಶ್ವಥಿ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಡಿಸಿಎಂ ಕಾರ್ಯದರ್ಶಿ ಪ್ರದೀಪ್, ಡಿಎಚ್‍ಒ ಮುಂತಾದವರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *