ಪಾಸಿಟೀವ್ ಬಂದ 1 ಗಂಟೆಯೊಳಗೆ ಹೋಂ ಐಸೋಲೇಷನ್ ಆದವರಿಗೆ ಮೆಡಿಕಲ್ ಕಿಟ್: ಡಿಸಿಎಂ

Public TV
2 Min Read

– ಐದು ಲಕ್ಷ ಕಿಟ್ ಖರೀದಿಗೆ ಸರಕಾರ ನಿರ್ಧಾರ

ಬೆಂಗಳೂರು: ಕೋವಿಡ್ ಸೋಂಕಿಗೆ ತುತ್ತಾದವರು ಹೋಮ್ ಐಸೋಲೇಷನ್ ಆದ ಒಂದು ಗಂಟೆಯೊಳಗೇ ಅವರ ಮನೆಗೇ ಮೆಡಿಕಲ್ ಕಿಟ್ ತಲುಪಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಿಟ್‍ಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ತಕ್ಷಣವೇ 5 ಲಕ್ಷ ಮೆಡಿಕಲ್ ಕಿಟ್‍ಗಳನ್ನು ಖರೀದಿ ಮಾಡಲು ಸರಕಾರ ನಿರ್ಧರಿಸಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕಿಟ್ ಖರೀದಿ ಮಾಡಲಾಗುವುದು” ಎಂದರು.

ಮನೆಗಳಲ್ಲಿಯೇ ಕ್ವಾರಂಟೈನ್ ಅಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಈ ಮೆಡಿಕಲ್ ಕಿಟ್‍ನಲ್ಲಿ ರೋಗ & ಸೋಂಕು ನಿರೋಧಕ ಔಷಧಗಳು, ವೈರಸ್ ನಿರೋಧಕ, ವಿಟಮಿನ್ ಟ್ಯಾಬ್ಲೆಟ್ ಸೇರಿದಂತೆ ರೋಗ ಉಲ್ಬಣವಾಗುವುದನ್ನು ತಡೆಯುವ ಎಲ್ಲ ಔಷಧಗಳೂ ಇರುತ್ತವೆ. ಜತೆಗೆ, ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾಗಿರುವ ‘ಕಾಲ್ಟಿಸಿನ್’ ಮಾತ್ರೆಯೂ ಇರುತ್ತದೆ. 10 ದಿನಕ್ಕೆ ಆಗುವಷ್ಟು ಔಷಧಿ ಕಿಟ್‍ನಲ್ಲಿ ಇರುತ್ತದೆ. ಜತೆಗೆ ಟೆಲಿ ಕನ್ಸಲ್‍ಟೆನ್ಸಿ ಸೌಲಭ್ಯವೂ ಇರುತ್ತದೆ ಎಂದರು ಡಿಸಿಎಂ.

ಮೇ 15ರಿಂದ ಕ್ಷಿಪ್ರಗತಿಯಲ್ಲಿ ಹಂಚಿಕೆ
ಈಗಾಗಲೇ ರಾಜ್ಯದೆಲ್ಲಡೆ ಈ ಕಿಟ್ ಕೊಡಲಾಗುತ್ತಿದೆ. ಆದರೆ, ತಲುಪಿಸುವುದು ಕೊಂಚ ವಿಳಂಬವಾಗುತ್ತಿತ್ತು. ಅದನ್ನು ಸರಿಪಡಿಸಲಾಗಿದೆ. ಮೇ 15ರಿಂದ ಪಾಸಿಟೀವ್ ಬಂದು ಹೋಮ್ ಐಸೋಲೇಷನ್ ಆದವರಿಗೆ ಒಂದು ಗಂಟೆಯಲ್ಲೇ ಕಿಟ್ ತಲುಪಿಸಲಾಗುವುದು. ಪ್ರತಿ ತಾಲೂಕಿನ ಆಸ್ಪತ್ರೆ, ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇವು 24/7 ಲಭ್ಯ ಇರುತ್ತವೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಸೋಂಕಿನ ಬಗ್ಗೆ ಜನರು ಅಸಡ್ಡೆ ಮಾಡಬಾರದು. ರೋಗ ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟೀವ್ ಬಂದರೆ ಕ್ಷಣ ಮಾತ್ರವೂ ತಡ ಮಾಡದೇ ಚಿಕಿತ್ಸೆಯನ್ನು ಆರಂಭಿಸಬೇಕು. ಒಂದು ವೇಳೆ ತಡವಾಗಿ, ಸೋಂಕು ಎರಡನೇ ಹಂತಕ್ಕೆ ಬಂದರೆ ಆಕ್ಸಿಜನ್ ಸ್ಯಾಚುರೇಷನ್ ಕಮ್ಮಿಯಾಗುವುದು, ಉಸಿರಾಟದ ತೊಂದರೆ ಆಗುವುದು ಇತ್ಯಾದಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಪ್ರತಿಪಕ್ಷಗಳ ನಡೆ ಸರಿಯಲ್ಲ
ಸೋಂಕಿನ ವಿರುದ್ಧ ಸರಕಾರ ಯುದ್ಧೋಪಾದಿಯಲ್ಲಿ ಹೋರಾಟ ನಡೆಸುತ್ತಿದೆ. ಆದರೆ, ಕಷ್ಟಕಾಲದಲ್ಲಿ ಸರಕಾರಕ್ಕೆ ಹೆಗಲು ಕೊಟ್ಟು ಕೆಲಸ ಮಾಡಬೇಕಾದ ಪ್ರತಿಪಕ್ಷಗಳು ವೃಥಾ ಆರೋಪ ಮಾಡುತ್ತಿವೆ ಎಂದು ಡಾ.ಅಶ್ವತ್ಥನಾರಾಯಣ ದೂರಿದರು.

ಲಸಿಕೆ ಬಂದ ಹೊಸದರಲ್ಲಿ ನಮ್ಮ ಸಂಶೋಧಕರು ಅವಿಶ್ರಾಂತವಾಗಿ ಶ್ರಮಿಸಿ ಕಂಡು ಹಿಡಿದ ಲಸಿಕೆಯ ವಿರುದ್ಧವೇ ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸಿದರು. ಈಗ ನೋಡಿದರೆ, ಲಸಿಕೆ ಜಪ ಮಾಡುತ್ತಿದ್ದಾರೆ. ಕೇವಲ ರಾಜಕೀಯ ಕಾರಣಗಳಿಗಾಗಿ ಕೋವಿಡ್ ಸಂಕಷ್ಟವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *