ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ: ವೇದವ್ಯಾಸ ಕಾಮತ್

Public TV
2 Min Read

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೆಚ್ಚವನ್ನು ಮಂಗಳೂರು ಮಹಾನಗರ ಪಾಲಿಕೆ ಭರಿಸಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಂಸದರ ವಾರ್ ರೂಂನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2 ವಿದ್ಯುತ್ ಚಿತಾಗಾರಗಳಿವೆ. ಅದರಲ್ಲಿ ತಾಂತ್ರಿಕ ಕಾರಣಗಳಿಂದ ಬೋಳೂರಿನ ಚಿತಾಗಾರ ಕಾರ್ಯ ನಿರ್ವಹಿಸದಿರುವ ಕಾರಣ ಕಟ್ಟಿಗೆಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಇದಕ್ಕೆ 8 ಸಾವಿರ ರೂಪಾಯಿ ದರವಿದ್ದುದನ್ನು 5,500 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಆದರೆ ಕೋವಿಡ್ ಸಾವಿನ ಸನ್ನಿವೇಶಗಳಲ್ಲಿ ದುಪ್ಪಟ್ಟು ಹಣ ಕೇಳುತ್ತಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ವೆಚ್ಚವನ್ನು ಮಹಾನಗರ ಪಾಲಿಕೆಯೇ ಭರಿಸುವಂತೆ ಮೇಯರ್ ಹಾಗೂ ಆಯುಕ್ತರ ಜೊತೆ ಮಾತುಕತೆ ನಡೆಸಿ ಸೂಚನೆ ನೀಡಲಾಗಿದೆ. ಕೋವಿಡ್ ಸಂಕಷ್ಟದ ಸನ್ನಿವೇಶದಲ್ಲಿ ಸಂಸದರು, ಶಾಸಕರು ಹಾಗೂ ಮೇಯರ್ ಅವರು ಕೈಗೊಂಡ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಅಭಿನಂದನೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ರೈ ಬೋಳಿಯಾರು, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಜೀ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಲೀಲಾವತಿ ಪ್ರಕಾಶ್, ಸಂದೀಪ್ ಗರೋಡಿ, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಪೂರ್ಣಿಮಾ, ಜಗದೀಶ್ ಶೆಟ್ಟಿ ಬೋಳೂರು, ಶಕಿಲಾ ಕಾವಾ, ಮನೋಹರ್ ಶೆಟ್ಟಿ, ಶೈಲೇಶ್ ಶೆಟ್ಟಿ ಅತ್ತಾವರ, ಭರತ್, ಗಣೇಶ್ ಕುಲಾಲ್, ವೀಣಾ ಮಂಗಲ, ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ರಾಧಾಕೃಷ್ಣ, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲಪ್ರಧಾನ ಕಾರ್ಯದರ್ಶಿ ರೂಪಾ ಡಿ. ಬಂಗೇರ, ಸುರೇಂದ್ರ ಜಪ್ಪಿನಮೊಗರು, ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಡಾ. ಅಣ್ಣಯ್ಯ ಕುಲಾಲ್, ಸಂಜಯ್ ಪ್ರಭು, ಜಿತೇಂದ್ರ ಕೊಟ್ಟಾರಿ, ಡಾ. ಜಿ.ಕೆ ಭಟ್, ಸುಜನ್ ದಾಸ್ ಕುಡುಪು, ರಘು ಸಾಲ್ಯಾನ್, ಜಮಾಲ್, ನೀರಜ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *