ಪಾಕ್ ರಾಷ್ಟ್ರಪತಿ ಭವನದಲ್ಲೇ ನನ್ನ ಮೇಲೆ ಅತ್ಯಾಚಾರವಾಗಿತ್ತು: ಸಿಂಥಿಯಾ ಆರೋಪ

Public TV
2 Min Read

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರಪತಿಭವನದಲ್ಲೇ ನನ್ನ ಮೇಲೆ ಅತ್ಯಾಚಾರವಾಗಿತ್ತು ಎಂದು ಅಮೆರಿಕದ ಮಹಿಳೆ, ಬ್ಲಾಗರ್ ಸಿಂಥಿಯಾ ಡಾನ್ ರಿಚ್ಚಿ ಆರೋಪಿಸಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖಂಡ ಯೂಸುಫ್ ರಾಜಾ ಗಿಲಾನಿ ದೈಹಿಕ ಹಿಂಸೆ ನೀಡಿದ್ದರು. ಅಷ್ಟೇ ಅಲ್ಲದೆ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಿಂಥಿಯಾ ರಿಚ್ಚಿ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ 2011ಕ್ಕೂ ಮುನ್ನವೇ ನಡೆದಿದೆ ಎನ್ನಲಾಗಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿಂಥಿಯಾ ರಿಚ್ಚಿ, ನನ್ನ ಕಥೆ ತುಂಬಾ ಭಾವುಕವಾಗಿದೆ. ಈ ಬಗ್ಗೆ ಇದುವರೆಗೂ ನನ್ನ ಕುಟುಂಬಕ್ಕೂ ತಿಳಿದಿಲ್ಲ. ನಾನು ಸಕಾರಾತ್ಮಕವಾಗಿರಲು ಪ್ರಯತ್ನಿಸಿ, ಪಾಕಿಸ್ತಾನದ ಒಳ್ಳೆಯದನ್ನೇ ಸ್ವೀಕರಿಸಿದೆ. ಆದರೆ ಕೆಟ್ಟದ್ದನ್ನು ಸಹ ಅನುಭವಿಸಿದ್ದೇನೆ. ಸದ್ಯ ಸತ್ಯವನ್ನು ಹೇಳಲು ಬಯಸುತ್ತೇನೆ. ಇದರಿಂದ ಮಹಿಳೆಯರು, ಸ್ಥಳೀಯರು ಏಕಾಂಗಿಯಾಗಿಲ್ಲ ಎಂದು ಅರ್ಥಮಾಡಿಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ, “ನಾನು ಪಿಪಿಪಿ ಮೇಲೆ ದೋಷಾರೋಪಣೆ ಮಾಡುತ್ತಿಲ್ಲ. ಏಕೆಂದರೆ ನಾನು ಬೇರೆ ಬೇರೆ ಪಕ್ಷಗಳ ಪುರುಷರಿಂದ ನಿಂದಿಸಲ್ಪಟ್ಟಿದ್ದೇನೆ. ಆದರೆ ಎರಡು ಪ್ರಕರಣಗಳು ಪಿಪಿಪಿಗೆ ಸಂಬಂಧಿಸಿವೆ. ಅನೇಕರು ಸೆಕ್ಸ್ ಗಾಗಿ ಇಷ್ಟಪಟ್ಟರು ಎನ್ನುವುದನ್ನು ನಿಮಗೆ ತಿಳಿಸುತ್ತಿದ್ದೇನೆ” ಎಂದು ಸಿಂಥಿಯಾ ಹೇಳಿದ್ದಾರೆ.

“ಪಿಪಿಪಿ ನಾಯಕರು ನನ್ನ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಗೀಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಅತ್ಯಾಚಾರದ ಅದ್ಭುತ ಕಥೆಗಳನ್ನು ಹೇಳುವುದನ್ನು ಆನಂದಿಸುತ್ತಾರೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.

“ಅವರು ಅತ್ಯಾಚಾರ ಸಂಸ್ಕೃತಿಯನ್ನು ನಿಲ್ಲಿಸಬೇಕು. ಈ ಅಸಹ್ಯಕರ ಕೆಲಸದ ಬಗ್ಗೆ ಮಹಿಳೆಯರು ಒಂದಾಗಬೇಕು ಮತ್ತು ಮಕ್ಕಳಿಗೆ ತಿಳಿಸಬೇಕು. ಇದು ಕೇವಲ ಪಿಪಿಪಿಯ ವಿಷಯವಲ್ಲ. ಅನೇಕ ರಾಜಕೀಯ ಪಕ್ಷಗಳು ನನ್ನನ್ನು ಶೋಷಿಸಿವೆ. ಈ ಘಟನೆಗಳ ಬಗ್ಗೆ ನಾನು ಕುಟುಂಬಕ್ಕೆ ಎಂದಿಗೂ ಹೇಳಲಿಲ್ಲ. ಪಾಕಿಸ್ತಾನದ ಉತ್ತಮ ಚಿತ್ರಣವನ್ನು ರಚಿಸಲು ನಾನು ಯಾವಾಗಲೂ ಶ್ರಮಿಸುತ್ತೇನೆ” ಎಂದು ಸಿಂಥಿಯಾ ತಿಳಿಸಿದ್ದಾರೆ.

ಈ ಸಂಬಂಧ ಸಿಂಥಿಯಾ ಶುಕ್ರವಾರ ಫೇಸ್‍ಬುಕ್‍ನಲ್ಲಿ ವಿಡಿಯೋ ಬಿಡುಗಡೆ ಮಾಡಿ, ರಹಮಾನ್ ಮಲಿಕ್ ಮತ್ತು ಗಿಲಾನಿ ವಿರುದ್ಧ ಆರೋಪಿಸಿದ್ದರು. ಸಿಂಥಿಯಾ ಪ್ರಕಾರ, 2011ರಲ್ಲಿ ರಾಷ್ಟ್ರಪತಿ ಭವನದಲ್ಲಿ ವಾಸವಾಗಿದ್ದಾಗ ಈ ಘಟನೆ ಸಂಭವಿಸಿದೆ. ವಿಶೇಷವೆಂದರೆ ಅವರು ಈಗ ಪ್ರಧಾನಿ ಇಮ್ರಾನ್ ಖಾನ್ ಅವರ ಸೋಷಿಯಲ್ ಮೀಡಿಯಾ ತಂಡದಲ್ಲಿದ್ದಾರೆ.

ಮಾದಕ ಪದಾರ್ಥಗಳನ್ನು ಬೆರೆಸಿದ ಪಾನೀಯವನ್ನು ನನಗೆ ನೀಡಲಾಗಿತ್ತು. ಆಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಆದರೆ ನಾನು ಸುಮ್ಮನಿದ್ದೆ. ಏಕೆಂದರೆ ಪಿಪಿಪಿ ನನಗೆ ಸರ್ಕಾರದಲ್ಲಿ ಸಹಾಯ ಮಾಡುತ್ತಿತ್ತು. ಈಗ ನಾನು ಯಾರನ್ನ ಬೇಕಾದರೂ ಎದುರಿಸಲು ಸಿದ್ಧ ಎಂದು ಸಿಂಥಿಯಾ ಶುಕ್ರವಾರ ಹೇಳಿದ್ದರು.

https://www.facebook.com/cynthiadritchie/videos/3012638535481275/?t=330

ಈ ಘಟನೆಯನ್ನು ಪಾಕಿಸ್ತಾನದ ಅಮೆರಿಕ ರಾಯಭಾರ ಕಚೇರಿಗೆ ತಿಳಿಸಿದ್ದೇನೆ. ಆದರೆ ಅಲ್ಲಿಂದ ಸರಿಯಾದ ಉತ್ತರ ದೊರೆತಿಲ್ಲ. ನನ್ನ ಮೇಲೆ ಅತ್ಯಾಚಾರ, ದೈಹಿಕ ಹಿಂಸೆ ನಡೆದ ಸಂದರ್ಭದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಉತ್ತಮ ಸಂಬಂಧವಿರಲಿಲ್ಲ ಎಂದು ತಿಳಿಸಿದ್ದರು.

ಆದರೆ ಮಾಜಿ ಪ್ರಧಾನಿ ಗಿಲಾನಿ ಸಿಂಥಿಯಾ ಅವರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅವನ್-ಎ-ಸದರ್ (ಪಾಕಿಸ್ತಾನದ ರಾಷ್ಟ್ರಪತಿ ಭವನ)ದಲ್ಲಿ ಪ್ರಧಾನ ಮಂತ್ರಿಯೊಬ್ಬರು ಈ ರೀತಿಯ ನಡೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಮಾನ್ ಮಲಿಕ್ ಈವರಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *