ಪಾಕ್‍ನಿಂದ ಜಮ್ಮು ಕಾಶ್ಮೀರಕ್ಕೆ ಗುಪ್ತ ಸುರಂಗ

Public TV
3 Min Read

ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಭಾರತ ಹಾಗೂ ಪಾಕಿಸ್ತಾನ ಗಡಿ ದಾಟುವ ವರೆಗೂ ಗುಪ್ತ ಸುರಂಗ ಮಾರ್ಗ ಇರುವುದನ್ನು ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಪತ್ತೆ ಹಚ್ಚಿದೆ.

ಶನಿವಾರ ಈ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಈ ಗುಪ್ತ ಸುರಂಗ ಮಾರ್ಗ ಪಾಕಿಸ್ತಾನದಿಂದ ಆರಂಭವಾಗಿ ಭಾರತಕ್ಕೆ ತಲುಪಿದೆ. ಪಾಕಿಸ್ತಾನದ ಕುಮ್ಮಕ್ಕು ಇಲ್ಲದೆ ಈ ಪರಿಪ್ರಮಾಣದ ಸುರಂಗ ಮಾರ್ಗ ಕೊರೆಯಲು ಸಾಧ್ಯವೇ ಇಲ್ಲ. ಇದಕ್ಕೆ ಪಾಪಿ ಪಾಕಿಸ್ತಾನ ಕುಮ್ಮಕ್ಕು ನೀಡಿದೆ. ಇದನ್ನು ಭಾರತ ಖಂಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಜಮ್ಮುವಿನ ಬಿಎಸ್‍ಎಫ್ ಐಜಿ ಎನ್.ಎಸ್.ಜಮ್ವಾಲ್ ಮಾಹಿತಿ ನೀಡಿದ್ದು, ಸಾಂಬಾ ಪ್ರದೇಶದಲ್ಲಿ ಗುಪ್ತ ಸುರಂಗ ಮಾರ್ಗ ಇರುವುದನ್ನು ನಮ್ಮ ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದ್ದು, ಈ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಲ್ಲದೆ ಸುರಂಗವನ್ನು ಮರಳು ಚೀಲಗಳಿಂದ ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.

ಮರಳು ಚೀಲಗಳ ಮೇಲೆ ಪಾಕಿಸ್ತಾನದ ಗುರುತು ಇದೆ. ಯಾರೋ ಯೋಜನೆ ರೂಪಿಸಿಯೇ ಈ ಸುರಂಗವನ್ನು ತೋಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಅಲ್ಲದೆ ಎಂಜಿನಿಯರಿಂಗ್ ತಂಡ ಸಹ ಇದನ್ನೇ ಹೇಳಿದೆ. ಈ ಸುರಂಗ ಗಡಿ ಫೆನ್ಸಿಂಗ್ ಬಳಿಯ ಭಾರತದ ಭೂಭಾಗದಲ್ಲಿ 20 ಅಡಿಗಳಷ್ಟು ಉದ್ದವಿದ್ದು, 3-4 ಅಡಿಯಷ್ಟು ಅಳತೆಯನ್ನು ಹೊಂದಿದೆ.

ಈ ಸುರಂಗ ಮಾರ್ಗ ಯಾರಿಗೂ ಗೊತ್ತಾಗಬಾರದೆಂದು ಮರಳುಗಳನ್ನು ತುಂಬಿದ ಚೀಲಗಳಿಂದ ಮುಚ್ಚಲಾಗಿದೆ. ಈ ಮರಳು ಚೀಲಗಳು ಪಾಕಿಸ್ತಾನದ ನಿರ್ಮಿತವಾಗಿದ್ದು, ಇದರ ಮೇಲೆ ಶಕರ್‍ಗರ್, ಕರಾಚಿ ಎಂದು ಬರೆಯಲಾಗಿದೆ. ಈ ಸುರಂಗ ತೆರೆದಿರುವ ಸ್ಥಳ ಅಂತರಾಷ್ಟ್ರೀಯ ಗಡಿಯಿಂದ ಭಾರತದ ಕಡೆಗೆ ಸುಮಾರು 170 ಮೀಟರ್ ದೂರದಲ್ಲಿದೆ ಎಂದು ಜಮ್ವಾಲ್ ತಿಳಿಸಿದ್ದಾರೆ.

ಪಾಕಿಸ್ತಾನಿ ರೇಂಜರ್ ಹಾಗೂ ಇತರೆ ಏಜೆನ್ಸಿಗಳ ಅನುಮತಿ ಹಾಗೂ ಸಹಾಯವಿಲ್ಲದೆ ಈ ಪರಿಪ್ರಮಾಣದ ಸುರಂಗವನ್ನು ಅಗೆಯಲು ಸಾಧ್ಯವೇ ಇಲ್ಲ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪಾಕಿಸ್ತಾನದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ವಿವರಿಸಿದ್ದಾರೆ.

ಬಿಎಸ್‍ಎಫ್ ಯೋಧರು ಈ ಕುರಿತು ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಅಂತರಾಷ್ಟ್ರೀಯ ಗಡಿ ಪ್ರದೇಶದುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚೆಗೆ ಪಂಜಾಬ್ ನಲ್ಲಿ ಐವರು ನುಸುಳುಕೋರರನ್ನು ಹತ್ಯೆ ಮಾಡಿದ ಸ್ಥಳ ಸೇರಿದಂತೆ ಜಮ್ಮು ಹಾಗೂ ವಿವಿಧ ಪ್ರದೇಶಗಳಲ್ಲಿ ಹೆಚ್ಚಿ ನಿಗಾ ವಹಿಸಲಾಗಿದೆ. ಭಾರತದೊಳಗೆ ನುಸುಳಲು ಹಲವು ಉಗ್ರರು ಕಾಯುತ್ತಿದ್ದಾರೆ ಎಂಬ ಗುಪ್ತಚರ ದಳದ ಮಾಹಿತಿ ಹಿನ್ನೆಲೆ ಭಾರತದ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಜಮ್ಮು, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್ ಸೇರಿದಂತೆ 3,300 ಕಿ.ಮೀ.ಯ ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಬಿಎಸ್‍ಎಫ್ ಯೋಧರನ್ನು ನಿಯೋಜಿಸಲಾಗಿದೆ. ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಜಮ್ವಾಲ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *