ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್

Public TV
1 Min Read

ಹೈದರಾಬಾದ್: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ.

ಹೈದರಾಬಾದ್‍ನ ಪವನ್ ಕಲ್ಯಾಣ್ ಅವರ ಕಚೇರಿಗೆ ಕಿಚ್ಚ ಸುದೀಪ್ ಭೇಟಿ ಮಾಡಿದ್ದು, ಈ ಫೋಟೋಗಳು ಇದೀಗ ಸಖತ್ ವೈರಲ್ ಆಗಿವೆ. ಭೇಟಿ ಮಾಡಿದ ಕುರಿತು ಕಿಚ್ಚ ಸುದೀಪ್ ಸಹ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸರಳ ವ್ಯಕ್ತಿತ್ವ ಹೊಂದಿರುವ ಮಾನವನನ್ನು ಭೇಟಿಯಾದೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ವಂಡರ್ ಫುಲ್ ಇಂಟರ್ಯಾಕ್ಟಿಂಗ್ ವಿತ್ ಯು ಸರ್ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

ಸುದೀಪ್ ಟ್ವೀಟ್ ಮಾಡುವುದಕ್ಕೂ ಮೊದಲೇ ಇಬ್ಬರು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ಪವನ್ ಕಲ್ಯಾಣ್ ಅವರ ಕಚೇರಿಯಲ್ಲಿ ಇಬ್ಬರೂ ನಟರು ಸುಮಾರು ಹೊತ್ತು ಚರ್ಚೆ ನಡೆಸಿದ್ದಾರೆ. ಆದರೆ ಯಾವ ಕಾರಣಕ್ಕೆ ಕಿಚ್ಚ ಸುದೀಪ್ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ ಎಂಬುದಕ್ಕೆ ಖಚಿತ ಮಾಹಿತಿ ತಿಳಿದಿಲ್ಲ.

ಅನ್‍ಲಾಕ್ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಬಹುತೇಕ ಸಿನಿಮಾಗಳ ಶೂಟಿಂಗ್ ಭರದಿಂದ ಸಾಗಿದೆ. ಅದೇ ರೀತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಫ್ಯಾಂಟಮ್ ಚಿತ್ರದ ಶೂಟಿಂಗ್ ಇತ್ತೀಚೆಗೆ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲೇ ನಡೆಯುತ್ತಿತ್ತು. ಹೀಗಾಗಿ ಫ್ಯಾಂಟಮ್ ಚಿತ್ರದ ಇಡೀ ತಂಡ ಹೈದರಾಬಾದ್‍ನಲ್ಲೇ ಬೀಡು ಬಿಟ್ಟಿದೆ. ಇದೇ ಗ್ಯಾಪ್‍ನಲ್ಲಿ ಕಿಚ್ಚ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಹಾಗೂ ಫ್ಯಾಂಟಮ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಆಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅನುಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ವೇಳೆ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕಿಚ್ಚ ಸುದೀಪ್ ಅಚ್ಚರಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *