ಪರೀಕ್ಷೆಗಿಂತ ಮಕ್ಕಳ ಜೀವವೇ ಮುಖ್ಯವಾಗಿದ್ದು, ಎಕ್ಸಾಂ ರದ್ದು ಮಾಡಿ: ವಾಟಾಳ್ ನಾಗರಾಜ್

Public TV
2 Min Read

ಹಾಸನ: ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೀವವೇ ಮುಖ್ಯವಾಗಿರುವುದರಿಂದ ಯಾವ ತರಗತಿಯ ಪರೀಕ್ಷೆಗಳನ್ನು ನಡೆಸದೇ ಪಾಸ್ ಮಾಡುವಂತೆ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಹಾಸನದ ಎನ್.ಆರ್ ವೃತ್ತದಲ್ಲಿ ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಇದೇ ವೇಳೆ ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದ ವಾಟಾಳ್ ನಾಗರಾಜ್, ಎಸ್.ಎಸ್.ಎಲ್.ಸಿ, ಎಂಜಿನಿಯರಿಂಗ್, ಫಾರ್ಮಸಿ ಹಾಗೂ ಡಿಪ್ಲೊಮಾ ಸೇರಿದಂತೆ ಎಲ್ಲಾ ಪದವಿಗಳನ್ನು ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ತೆಲಂಗಾಣ, ಆಂಧ್ರ, ಹರಿಯಾಣ, ತಮಿಳುನಾಡು, ಪುದುಚೇರಿ, ದೆಹಲಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಲ್ಲರನ್ನೂ ಪಾಸ್ ಮಾಡಿದೆ. ಐಐಟಿ ಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಿಗ್ರಿ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡಿದೆ ಎಂದರು.

ದೇಶದ 12 ರಾಜ್ಯಗಳು ಪರೀಕ್ಷೆಗಳಿಲ್ಲದೆ ಪಾಸ್ ಮಾಡಿದೆ ಎಂದ ವಾಟಾಳ್ ನಾಗರಾಜ್, ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೀವ ಮುಖ್ಯವೇ ಹೊರತು ಪರೀಕ್ಷೆ ಮುಖ್ಯವಲ್ಲ. ಕೊರೊನಾ ಸೋಂಕು ಎಂಬುದು ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ವೈರಸ್ ಹರಡಿದೆ. ಲಾಕ್ ಡೌನ್ ಇದ್ದ ಸಮಯದಲ್ಲಿ ಕಡಿಮೆ ಇದ್ದು, ನಂತರದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ಕೊರೊನಾ ಸೋಂಕಿನಿಂದ ನರಳುತ್ತಿದೆ. ಶಾಲೆಗಳಿರಬಹುದು, ಕಾಲೇಜುಗಳಿರಬಹುದು ಯಾವ ಪಾಠಗಳು ನಡೆದಿರುವುದಿಲ್ಲ. ಪಾಠಗಳನ್ನು ನಡೆಸದೇ, ವಿದ್ಯಾರ್ಥಿಗಳು ಓದದೆ, ಪರೀಕ್ಷೆ ಬರೆಯಿರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ಪ್ರಶ್ನೆ ಮಾಡಿದರು.

ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಂಭಿರವಾಗಿ ಯೋಚನೆ ಮಾಡಬೇಕಾಗಿದೆ. ಆನ್‍ಲೈನ್ ಶಿಕ್ಷಣ ಸಂಪೂರ್ಣ ವಿಫಲವಾಗಿದ್ದು, ಆನ್ ಲೈನ್ ಪರೀಕ್ಷೆ ಮಾಡುವುದಾದರೇ ಲ್ಯಾಪ್ ಟಾಪ್, ಮೊಬೈಲ್ ಜೊತೆಗೆ ವಿದ್ಯುತ್ ಸರಿಯಾಗಿ ಇರಬೇಕು ಹಾಗೂ ಇಂಟರ್ ನೆಟ್ ಸರಿಯಾಗಿ ಕೆಲಸ ಮಾಡಬೇಕು. ಈ ಮೂಲಕ ಪರೀಕ್ಷೆ ಸಾಧ್ಯವಿಲ್ಲ. ನಮ್ಮಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಇರುವುದರಿಂದ ಈ ವ್ಯವಸ್ಥೆ ಆಗುವುದಿಲ್ಲ. ಜೊತೆಗೆ ಆನ್‍ಲೈನ್ ಪಾಠ ಬಹುತೇಕರಿಗೆ ಅರ್ಥವಾಗುವುದಿಲ್ಲ ಎಂದರು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾಡಲು ಸರ್ಕಾರ ಹೊರಟಿದ್ದು, ಸುಮಾರು 9 ಲಕ್ಷ ಮಕ್ಕಳು ಮತ್ತು ಪೋಷಕರು 10 ಲಕ್ಷ ಜನ ಜೊತೆಗೆ ಉಪಧ್ಯಾಯರು ಹಾಗೂ ಶಾಲೆ ಸಿಬ್ಬಂದಿ ಸೇರುತ್ತಾರೆ. ಮೊದಲು ನಮ್ಮ ಜೀವ ಆಮೇಲೆ ಪರೀಕ್ಷೆಯಾಗಲಿ. ಇಂದು ಜೀವಕ್ಕೆ ಬೆಲೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಳೇಗಾರಿಕೆ ಮಾಡುತ್ತಿದ್ದು, ಈ ಬಗ್ಗೆ ಗಮನ ನೀಡಿ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪರೀಕ್ಷೆ ಇಲ್ಲದೆ ಪಾಸ್ ಮಾಡಿ, ಇಲ್ಲವೇ ಮಕ್ಕಳ ಜೀವ ಭದ್ರತೆಗೆ 50 ಲಕ್ಷ ರೂಪಾಯಿ ಹಾಗೂ ಶಿಕ್ಷಕರ ಜೀವ ಭದ್ರತೆಗೆ 25 ಲಕ್ಷ ರೂ ಮೀಸಲಿಟ್ಟು ಪರೀಕ್ಷೆಗಳನ್ನ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *