ಪರಿಶಿಷ್ಟರ ಮೀಸಲಾತಿ ನಾಶಕ್ಕೆ ಸಚಿವ ಈಶ್ವರಪ್ಪ ಹುನ್ನಾರ: ಎನ್.ಮಹದೇವ ಸ್ವಾಮಿ ಆರೋಪ

Public TV
2 Min Read

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆ ಹೋರಾಟಕ್ಕೆ ನೇತೃತ್ವ ವಹಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಪಾರದರ್ಶಕ ಕಾಯ್ದೆ ಮೂಲಕ 50ಲಕ್ಷ ರೂ.ವರೆಗಿನ ಸರಕಾರಿ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಕಲ್ಪಿಸಿರುವ ಮೀಸಲಾತಿಯ ನಾಶಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ 2 ಕೋಟಿ ರೂ.ಗಳ ವರೆಗಿನ ಕಾಮಗಾರಿಗಳನ್ನು ನೇರವಾಗಿ ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್'(ಕೆಆರ್‌ಐಡಿಎಲ್‌) ನೀಡುವ ಉದ್ದೇಶದಿಂದಲೇ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.

ಅಕ್ರಮಗಳನ್ನು ತಡೆಗಟ್ಟುವುದು, ಕಾಮಗಾರಿ ಗುಣಮಟ್ಟ ಕಾಪಾಡುವುದು ಹಾಗೂ ಸರಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಿ, ಗುತ್ತಿಗೆದಾರರ ಮಧ್ಯೆ ಸ್ಪರ್ಧೆ ಏರ್ಪಡುವಂತೆ ಮಾಡಲು ಪಾರದರ್ಶಕ ಕಾಯ್ದೆಯನ್ನು ರೂಪಿಸಲಾಗಿದೆ. ಆದರೆ, ಇದೀಗ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದ್ದು, ‘4-ಜಿ’ ವಿನಾಯಿತಿ ನೀಡುವ ಮೂಲಕ ಸರಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗುತ್ತಿದೆ’ ಎಂದು ಅವರು ಆಕ್ಷೇಪಿಸಿದರು.

ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ: ಪಾರದರ್ಶಕ ಕಾಯ್ದೆ ಇರುವ ಕಾರಣದಿಂದ ಎಸ್ಸಿ-ಎಸ್ಟಿ ಗುತ್ತಿಗೆದಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ಎಲ್ಲ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡುವ ಮೂಲಕ ರಾಜ್ಯ ಸರಕಾರ ಆಂಧ್ರ ಮೂಲದ ಗುತ್ತಿಗೆದಾರರ ಉದ್ಧಾರ ಮಾಡಲು ಸಣ್ಣ-ಪುಟ್ಟ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಹದೇವಸ್ವಾಮಿ ದೂರಿದರು.

ಲೈಸನ್ಸ್ ಹಿಂದಿರುಗಿಸುವ ಹೋರಾಟ: ಸರಕಾರದಿಂದ ಪರವಾನಿಗೆ(ಲೈಸನ್ಸ್) ಪಡೆದು ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುವ ಮೂಲಕ ರಾಜ್ಯದ ಅಭಿವೃದ್ಧಿ ಜೊತೆಗೆ ನಾವು ಬದುಕುತ್ತಿದ್ದೇವೆ. ಆದರೆ, ಎಲ್ಲ ಕಾಮಗಾರಿಗಳನ್ನು ಕೆಆರ್‍ಐಡಿಎಲ್‍ಗೆ ನೀಡಲು ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದರೆ ಪರವಾನಿಗೆ ಪಡೆದ ನಮಗೆ ಕೆಲಸವೇ ಇರುವುದಿಲ್ಲ. ಆದುದರಿಂದ ರಾಜ್ಯ ಸರಕಾರ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ಮಾಡುವ ತೀರ್ಮಾನವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಎಸ್ಸಿ-ಎಸ್ಟಿ ಗುತ್ತಿಗೆದಾರರು ಲೈಸನ್ಸ್ ಹಿಂದಿರುಗಿಸುವ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಹದೇವಸ್ವಾಮಿ ಎಚ್ಚರಿಕೆ ನೀಡಿದರು.

ಈ ಹಿಂದೆ ರಾಜ್ಯ ಸರಕಾರ ಆಯವ್ಯಯದಲ್ಲಿ ಘೋಷಿಸಿರುವಂತೆ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ 50ಲಕ್ಷ ರೂ.ವರೆಗಿನ ಮೀಸಲಾತಿ ಮಿತಿಯನ್ನು 1 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಬೇಕು. ಜೊತೆಗೆ ಪಾರದರ್ಶಕ ಕಾಯ್ದೆ ತಿದ್ದುಪಡಿ ತೀರ್ಮಾನವನ್ನು ಕೂಡಲೇ ಕೈಬಿಡದಿದ್ದರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ನಾಗೇಶ್, ಟಿ.ಆರ್.ಎಸ್. ಕುಮಾರ್, ಮನೋಜ್ ಕುಮಾರ್, ಶಾಂತಕುಮಾರ್ ಹಾಗೂ ಆನಂದ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *