ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೂವರು ಹುದ್ದೆಯಿಂದ ವಜಾ, ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ

Public TV
2 Min Read

– ಪಬ್ಲಿಕ್ ಟಿವಿಗೆ ಆರೋಗ್ಯ ಸಚಿವ ಅಭಿನಂದನೆ

ಬೆಂಗಳೂರು: ಹಣ ಕೊಟ್ಟರೆ ಕೊರೊನಾ ನೆಗೆಟಿವ್ ರಿಪೋರ್ಟ್ ನಿಮ್ಮ ಕೈಗೆ ಸಿಗುತ್ತೆ ಎಂಬ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಮಾಡಿದ ಬೆನ್ನಲ್ಲೇ ಮೂವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಆಶಾ ವರ್ಕರ್, ಸ್ಟಾಫ್ ನರ್ಸ್, ಸ್ವಾಬ್ ಕಲೆಕ್ಟರ್ ಹುದ್ದೆಯಿಂದ ವಜಾ ಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮೂವರ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

 ಕೊರೊನಾ ರಿಪೋರ್ಟ್ ನೆಗೆಟಿವ್ ಸ್ಟಿಂಗ್ ಆಪರೇಷನ್ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಮೊದಲು ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಬ್ಲಿಕ್ ಟಿವಿ ಸ್ಟಿಂಗ್ ನೋಡಿ ವೈದ್ಯನಾಗಿ ನನಗೆ ನೋವಾಗಿದೆ. ಕೆಳಹಂತದ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಕೆಲಸ ಮಾಡಿರೋದು ನೋವಾಗಿದೆ. ತಕ್ಷಣ ಬಿಬಿಎಂಪಿ ಆಯುಕ್ತರ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಜಂಟಿ ಆಯುಕ್ತರು ಸ್ಥಳದಲ್ಲಿ ಈಗಾಗಲೇ ಇದ್ದಾರೆ. ಘಟನೆಯ ಸಂಪೂರ್ಣ ವಿವರ ತೆಗೆದುಕೊಂಡು ತಕ್ಷಣ ಕ್ರಮ ತೆಗೆದುಕೊಳ್ತೀನಿ. ಪಬ್ಲಿಕ್ ಟಿವಿ ಅಭಿಯಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೆಳ ಹಂತದ ನ್ಯೂನತೆ ಎತ್ತಿ ತೋರಿಸಿ ಕಣ್ಣು ತೆರೆಸುವ ಕೆಲಸ ಪಬ್ಲಿಕ್ ಟಿವಿ ಮಾಡಿದೆ. ಮುಂದೆ ಇಂತಹ ಘಟನೆ ಆಗದಂತೆ ಕಠಿಣ ಕಾನೂನು ಜಾರಿಗೆ ತರುತ್ತೇವೆ. ತಪಿತಸ್ಥರ ವಿರುದ್ದ ತಕ್ಷಣವೇ ಶಿಷ್ಟಾಚಾರದ ಅಡಿಯಲ್ಲಿ ಕ್ರಮ ತೆಗೆದುಕೊಳ್ತೀವಿ. ಇದೊಂದು ಅಮಾನವೀಯ, ಅನೈತಿಕ, ಕಾನೂನುಬಾಹಿರ ಕೆಲಸ. ಚಿಕಿತ್ಸೆ ಕೊಡೋ ಆರೋಗ್ಯ ಸಿಬ್ಬಂದಿ ಹೀಗೆ ತಪ್ಪು ಮಾಡಿದ್ರೆ ಅಮಾಯಕ ಜನರ ಜೀವಕ್ಕೆ ಸಮಸ್ಯೆ ಆಗುತ್ತೆ. ನೆಗೆಟೀವ್ ಅಂತ ಹೋಗಿ ಅವ್ರು ಬೇರೆ ಅವ್ರಿಗೆ ಹರಡಿ ಜೀವಕ್ಕೆ ಅಪಾರ ಆದ್ರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.

ವೈದ್ಯಕೀಯ ಕೆಲಸ ಮಾಡೋಕೆ ಹೃದಯ ಪೂರ್ವಕವಾಗಿ ಸೇರಿರುತ್ತೇವೆ. ಹೀಗೆ ಅನೈತಿಕವಾಗಿ ಹಣ ಮಾಡೋದು ವೈದ್ಯಕೀಯ ಜಗತ್ತಿಗೆ, ವೃತ್ತಿಗೆ ಅವಮಾನ ಮಾಡಿದ ಹಾಗೆ ಆಗಿದೆ. ಇವರ ಕೆಲಸದಿಂದ ನಾವು ತಲೆ ತಗ್ಗಿಸುವಂತೆ ಆಗಿದೆ. ಮುಂದೆ ಹೀಗೆ ಆಗದಂತೆ ಅಗತ್ಯ ಕ್ರಮವಹಿಸುತ್ತೇನೆ ಎಂದು ಭರವಸೆ ನಿಡಿದರು. ಇದನ್ನೂ ಓದಿ: ಕಾಸು ಕೊಟ್ರೆ ಸಿಗುತ್ತೆ ಕೋವಿಡ್ ನೆಗೆಟಿವ್ ರಿಪೋರ್ಟ್- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

ಪಬ್ಲಿಕ್ ಟಿವಿ ವರದಿ ಪ್ರಸಾರ ಆಗ್ತಿದ್ದಂತೆ ದಕ್ಷಿಣ ವಿಭಾಗದ ಜಂಟಿ ಆಯುಕ್ತ ವೀರಭದ್ರಯ್ಯ ಅವರು ಪೂಬ್ಬತಿ ಹೆರಿಗೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ವೇಳೆ ನರ್ಸ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡ ಅವರು ಯಾರಿದ್ದಾರೆ ಡಾಕ್ಟರ್ಸ್, ನರ್ಸ್ ಕರಿಯಿರಿ ಬೇಗ ಕಿಡಿಕಾರಿದ್ದಾರೆ. ನಂತರ ಅವರು ಗಂಟಲು ದ್ರವ ಸಂಗ್ರಹದ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಆದರೆ ಈ ವೇಳೆ ಜಂಟಿ ಆಯುಕ್ತ ಕೇಳಿದ ಗಂಟಲು ದ್ರವದ ದಾಖಲೆಗಳೇ ಆಸ್ಪತ್ರೆಯಲ್ಲಿ ಇಲ್ಲ. ಅಲ್ಲದೆ ಜಂಟಿ ಆಯುಕ್ತರು ಭೇಟಿ ವೇಳೆ ಆಶಾ ವರ್ಕರ್, ಸ್ವಾಬ್ ಕಲೆಕ್ಟರ್ ಬಂದಿರಲಿಲ್ಲ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೀರಭದ್ರಯ್ಯ, ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲು 4 ಜನರ ವೈದ್ಯಾಧಿಕಾರಿಗಳ ತಂಡ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವಗುಪ್ತಾ ಮಾತನಾಡಿ, ನಾನು ಇದನ್ನ ತನಿಖೆ ಮಾಡಿಸುತ್ತೇನೆ. ಕೆಳ ಹಂತದ ಹುದ್ದೆಯಲ್ಲಿ ಇರೋರು ಈ ರೀತಿ ಕೆಲಸ ಮಾಡೋದು ಸರಿ ಇಲ್ಲ. ಮಾಹಿತಿ ತೆಗೆದುಕೊಂಡು ತನಿಖೆ ಮಾಡಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *