ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕರೆಂಟ್ ಬಿಲ್‌ನಲ್ಲಿ ವ್ಯತ್ಯಾಸ ಇದ್ರೆ ಕಟ್ಟಬೇಡಿ

Public TV
3 Min Read

– ಪಬ್ಲಿಕ್ ಟಿವಿಯ ನಿರಂತರ ಅಭಿಯಾನದಿಂದ ಎಚ್ಚೆತ್ತ ಬೆಸ್ಕಾಂ
– ಸರಾಸರಿ ಬಿಲ್ ನೀಡಿದ್ದರಿಂದ ದುಬಾರಿ ಬಂದಿದೆ
– ಜೂನ್‍ವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲ್ಲ
– ದುಬಾರಿ ಬಿಲ್ ಪಾವತಿಸಿದ್ರೆ ಮೇ ತಿಂಗಳಲ್ಲಿ ಕಡಿತ
– ಸಮಸ್ಯೆ ಇದ್ರೆ ಮತ್ತೆ ರೀಡಿಂಗ್

ಬೆಂಗಳೂರು: ದುಬಾರಿ ವಿದ್ಯುತ್ ಬಿಲ್ ಪಡೆದು ಸಂಕಷ್ಟಕ್ಕೆ ಸಿಲುಕಿದ ಜನತೆಗೆ ಗುಡ್‍ನ್ಯೂಸ್. ದುಬಾರಿ ಬಿಲ್ ಪಡೆದ ಗ್ರಾಹಕರು ತಮ್ಮ ಗೊಂದಲಗಳನ್ನು ಬಗೆಹರಿಸಿ ಬಿಲ್ ಕಟ್ಟುವಂತೆ ಬೆಸ್ಕಾಂ ಹೇಳಿದ್ದು ಈ ಮೂಲಕ ಪಬ್ಲಿಕ್ ಟಿವಿ ನಿರಂತರ ಅಭಿಯಾನಕ್ಕೆ ದೊಡ್ಡ ಗೆಲುವು ಸಿಕ್ಕಿದೆ.

ಪಬ್ಲಿಕ್ ಟಿವಿ ಕಳೆದ ವಾರದಿಂದಲೇ ದುಬಾರಿ ಬಿಲ್ ವಿಚಾರವನ್ನು ಪ್ರಸ್ತಾಪ ಮಾಡಿ ವರದಿ ಮಾಡಿತ್ತು. ಇಂದು ಬೆಳಗ್ಗೆಯಿಂದಲೇ ಗ್ರಾಹಕರಿಗೆ ಹಳೆ ಬಿಲ್ ಎಷ್ಟು ಇತ್ತು ಈಗ ಲಾಕ್‍ಡೌನ್ ಅವಧಿಯಲ್ಲಿ ಎಷ್ಟು ಬಿಲ್ ಬಂದಿದೆ ಎಂಬ ವಿಚಾರವನ್ನು ಸಾಕ್ಷ್ಯ ಸಮೇತ ಮುಂದಿಟ್ಟು ನಿರಂತರವಾಗಿ ಪ್ರಸಾರ ಮಾಡಿತ್ತು. ಅಷ್ಟೇ ಅಲ್ಲದೇ ಎಲ್ಲ ಎಸ್ಕಾಂಗಳ ಎಂಡಿಗಳ ಹೆಸರು, ಫೋನ್ ನಂಬರ್, ಇಮೇಲ್, ಟ್ವಿಟ್ಟರ್ ಹ್ಯಾಂಡಲ್ ಹಾಕಿ ಅಭಿಯಾನ ಮಾಡಿತ್ತು.

ಈ ಅಭಿಯಾನದ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಎಂಡಿ ರಾಜೇಶ್ ಗೌಡ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಬಿಲ್ ವಿಚಾರದಲ್ಲಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

ಬೇಸಿಗೆ ಹಾಗೂ ಲಾಕ್ ಡೌನ್ ಇರುವುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಐಟಿ ಬಿಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿದ್ದರಿಂದ ಬಿಲ್ ಹೆಚ್ಚಾಗಿರಬಹುದು. ಅಲ್ಲದೆ 2 ತಿಂಗಳ ಬಿಲ್ ಆದ್ದರಿಂದ ಇದು ಹೆಚ್ಚಾಗಿದೆ ಎಂದು ಭಾವಿಸಿದ್ದೇನೆ. ಕೋವಿಡ್ 19 ಸುರಕ್ಷತೆ ದೃಷ್ಟಿಯಿಂದ ಹಲವು ಕಡೆಗಳಲ್ಲಿ ಮೀಟರ್ ರೀಡರ್ಸ್ ಮನೆಗಳಿಗೆ ಹೋಗಿಲ್ಲ. ಇದಕ್ಕಾಗಿ 3 ತಿಂಗಳ ಸರಾಸರಿ ಬಿಲ್ ಮಾಡಲು ಸೂಚಿಸಿದ್ದೆವು ಎಂಬ ವಿಚಾರವನ್ನು ಹೇಳಿದರು.

ಮಾರ್ಚ್ ಹಾಗೂ ಏಪ್ರಿಲ್ 2 ರೀಡಿಂಗ್ ಇದ್ದು ಅದನ್ನು ನೋಡಿ ಲೆಕ್ಕ ಹಾಕಲಾಗಿದೆ. ಬಳಕೆ ಜಾಸ್ತಿ ಆದಂತೆ ಸ್ಲಾಬ್ ಲಿಮಿಟ್ ಸಹ ಜಾಸ್ತಿ ಆಗುತ್ತದೆ. ಬಿಲ್‍ನಲ್ಲಿ ವ್ಯತ್ಯಾಸ ಇದ್ರೆ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಪರಿಶೀಲನೆ ಮಾಡಿ ಸರಿಯಾದ ಮೇಲೆ ಕಟ್ಟಬಹುದು. ಸಮಸ್ಯೆ ಇರುವವರು ಮೀಟರ್ ರೀಡಿಂಗ್ ಗೆ ಅವಕಾಶ ಮಾಡಿಕೊಡಿ. ನಾವು ಮೀಟರ್ ರೀಡಿಂಗ್ ಮಾಡಿದ ನಂತರ ನೀಡುವ ಬಿಲ್ ಪಾವತಿಸಬಹುದು ಎಂದು ರಾಜೇಶ್ ಗೌಡ ತಿಳಿಸಿದರು.

ಲಾಕ್‍ಡೌನ್ ಆಗಿದ್ದರಿಂದ ಕೆಲವರು ಮನೆಯನ್ನು ತೊರೆದು ಬೇರೆ ಕಡೆಯಲ್ಲಿದ್ದರು. ಅವರು ಮನೆಯಲ್ಲಿ ಇಲ್ಲದೇ ಇದ್ದರೂ ದುಬಾರಿ ಬಿಲ್ ಬಂದಿದೆ ಹೇಗೆ ಎಂಬ ಪಬ್ಲಿಕ್ ಟಿವಿಯ ವರದಿಗಾರರ ಪ್ರಶ್ನೆಗೆ ಈ ರೀತಿ ಸಮಸ್ಯೆ ಆಗಿದ್ದಲ್ಲಿ ಗ್ರಾಹಕರು ವಾಟ್ಸಪ್, ಇಮೇಲ್ ಮೂಲಕ ನಮಗೆ ಬಿಲ್ ಕಳುಹಿಸಿ. ಇದನ್ನು ಪರಿಶೀಲಿಸಿ ನಾವು ಬಿಲ್ ನೀಡುತ್ತೇವೆ. ಬೇಸಿಗೆ ಕಾರಣದಿಂದ ಕೊಂಚ ಬಿಲ್ ಹೆಚ್ಚಾಗಿದೆ. ಬಿಲ್ ವಿಚಾರದಲ್ಲಿ ಸ್ಪಷ್ಟತೆ ಬರುವವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದರು.

ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ನಮ್ಮ ಬಿಲ್ಲಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ. ವಿದ್ಯುತ್ ಬಳಕೆ ಜಾಸ್ತಿಯಾದಂತೆ ವಿದ್ಯುತ್ ಬಿಲ್ ಸ್ಲಾಬ್ ಏರಿಕೆಯಾಗುತ್ತದೆ. ರೀಡಿಂಗ್ ಸಮಯದಲ್ಲಿ ಹಲವು ಮಂದಿ ಡೋರ್ ಲಾಕ್ ಮಾಡಿದ್ದರು. ಡೋರ್ ಲಾಕ್ ಅಂತ ಮೀಟರ್ ರೀಡಿಂಗ್ ಯಂತ್ರದಲ್ಲಿ ಪ್ರೆಸ್ ಮಾಡಿದ್ರೆ ಸರಾಸರಿ ಬಿಲ್ ಬರುತ್ತದೆ. ಈ ಕಾರಣದಿಂದ ಬಿಲ್ ಏರಿಕೆಯಾಗಿರಬಹುದು. ಯಾವುದೇ ಕಾರಣಕ್ಕೂ ನಮ್ಮಿಂದ ಒಂದು ರೂ. ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗುವುದು ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ಹೇಳಿದರು.

ಬಿಲ್ ಬಗ್ಗೆ ಗೊಂದಲವಿದ್ರೆ 1912 ಸಹಾಯವಾಣಿಗೆ ಕರೆಮಾಡಿ ಪರಿಹರಿಸಿಕೊಳ್ಳಬಹುದು. ವಿದ್ಯುತ್ ಬಿಲ್ ನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳಿವೆ. ಕೆಲವು ಗ್ರಾಹಕರಿಗೆ ಸೀಲ್ಡೌನ್, ಡೋರ್ ಲಾಕ್, ಕ್ವಾರಂಟೈನ್ ಕಾರಣದಿಂದ ಸರಾಸರಿ ಬಿಲ್ ನೀಡಲಾಗಿದೆ. ಒಂದು ವೇಳೆ ಸರಾಸರಿ ಬಿಲ್ ತಾಳೆಯಾಗದಿದ್ದಲ್ಲಿ ಸಹಾಯವಾಣಿಗೆ ಕರೆಮಾಡಿದ್ರೆ ಪರಿಷ್ಕೃತ ಬಿಲ್ ನೀಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಬಿಲ್ ಪಾವತಿಸಿದವರಿಗೆ ಅವರ ಬಿಲ್ ಬಗ್ಗೆ ಅನುಮಾನವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಒಂದು ಕಡಿಮೆ ವಿದ್ಯುತ್ ಬಳಸಿಯೂ ದುಬಾರಿ ಬಿಲ್ ಬಂದಿದ್ದರೆ ಮೇ ತಿಂಗಳ ವಿದ್ಯುತ್ ಬಿಲ್ ನಲ್ಲಿ ಕಡಿತ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬಿಲ್ ಕಟ್ಟಲು ತಡಮಾಡಿದವರ ಮನೆಗೆ ವಿದ್ಯುತ್ ಸಂಪರ್ಕ ತೆಗೆಯುವುದು ಬೇಡ ಎಂದು ಸೂಚನೆ ನೀಡಲಾಗಿದೆ. ಜೂನ್ ವರೆಗೂ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಮಾಡುವುದಿಲ್ಲ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಪಷ್ಟನೆ ನೀಡಿದರು.

 

Share This Article
Leave a Comment

Leave a Reply

Your email address will not be published. Required fields are marked *