ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅಂತ್ಯಸಂಸ್ಕಾರಕ್ಕೆ 35 ಎಕರೆ ಭೂಮಿ ಗುರುತಿಸಿದ ಸರ್ಕಾರ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಹೀಗೆ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿ ಎಡವಟ್ಟು ಮಾಡುತ್ತಿರುವ ಸುದ್ದಿಯನ್ನು ಪಬ್ಲಿಕ್ ಟಿವಿ ನಿರಂತರವಾಗಿ ಸುದ್ದಿ ಮಾಡಿತ್ತು. ಈ ಬೆನ್ನಲ್ಲೇ ಇದೀಗ ವರದಿಗೆ ಫಲಶ್ರುತಿ ದೊರೆತಿದ್ದು, ನಗರದ ಹೊರವಲಯದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಜಾಗ ಮೀಸಲಿಡಲು ತೀರ್ಮಾನಿಸಲಾಗಿದೆ.

ಹೌದು. ಬೆಂಗಳೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಕುಂಬಳಗೋಡು, ಕುರುಬರಹಳ್ಳಿ, ಬೆಳ್ಳಂದೂರು, ಕೆ ಆರ್ ಪುರಂ ಸೇರಿದಂತೆ ಹಲವಡೆ 35 ಎಕರೆ ಜಾಗ ಮೀಸಲಿಡಲು ಬೆಂಗಳೂರು ಜಿಲ್ಲಾಧಿಕಾರಿ ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಶಿವನಪುರ, ಗಂಗೊಂಡನಹಳ್ಳಿ ಹಾಗೂ ಆವಲಹಳ್ಳಿಯಲ್ಲಿ ಜಾಗಗಳ ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ಕೆಲವೆಡೆ ತೆರವು ಕಾರ್ಯ, ಡಿಪಿಆರ್ ಸಿದ್ಧಪಡಿಸುವ ಕಾರ್ಯ ಹಾಗೂ ಟೆಂಡರ್ ಪ್ರಕ್ರಿಯೆ ಚಾಲನೆ ಕಾರ್ಯ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುತ್ತದೆ.

ಅವಾಂತರ ಏನು?
ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತರ ಅಂತ್ಯಸಂಸ್ಕಾರ ರಾಮಸ್ವಾಮಿಪಾಳ್ಯ ವಾರ್ಡಿನಲ್ಲಿ ನಡೆದಿದೆ. ಜೆಸಿ ರಸ್ತೆ – ನಂದಿದುರ್ಗ ರಸ್ತೆ ಮಧ್ಯೆ ಬರುವ ಸ್ಮಶಾನದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆದಿತ್ತು. ಮುಸ್ಲಿಂ ಸಮುದಾಯದ ನಂದಿದುರ್ಗ ಪೆರಲ್ ಗ್ರೌಂಡ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತುಇ. ಆದರೆ ಮೃತ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರ ಭಾರೀ ವಿರೋಧ ವ್ಯಕ್ತಪಡಿಸಿದ್ದರು.

ಕಳೆದ ಒಂದು ವಾರದಿಂದ ಇದುವರೆಗೆ 16 ಮೃತ ಸೊಂಕಿತರ ಅಂತ್ಯ ಸಂಸ್ಕಾರದ ಈ ಸ್ಮಶಾನದಲ್ಲಿ ಆಗಿದೆ. ಅಷ್ಟೇ ಅಲ್ಲದೇ ಅಂತ್ಯ ಸಂಸ್ಕಾರದಲ್ಲೂ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಕೇವಲ ಮೂರು ಅಡಿ ಗುಂಡಿ ತೋಡಿ ಅಂತ್ಯ ಸಂಸ್ಕಾರ ಮಾಡಲಾಗುತ್ತೆ. ಸ್ಮಶಾನದ 50 ಮೀಟರ್ ಅಂತರದಲ್ಲಿಯೇ ಮನೆಗಳಿವೆ. ಪಿಪಿಇ ಕಿಟ್‍ಗಳನ್ನೂ ಗುಂಡಿಗಳ ಬಳಿಯೇ ಬಿಸಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದರು.

ಅಲ್ಲದೇ ಗುಂಡಿ ತೋಡುವ ವ್ಯಕ್ತಿಗಳು ಕೂಡ ಮಾಸ್ಕ್ ಹಾಕಿಲ್ಲ. ಸ್ಮಶಾನದ ಪಕ್ಕದ ರಸ್ತೆಗೆ ಬಂದು ಟೀ ಕುಡಿಯುತ್ತಾರೆ, ಜನರೊಂದಿಗೆ ಓಡಾಡುತ್ತಾರೆ. ಸ್ಮಶಾನದ ಹತ್ತಿರ ಬೀಸಾಡಿದ ಪಿಪಿಇ ಕಿಟ್‍ಗಳನ್ನ ನಾಯಿಗಳು ರಸ್ತೆಗೆ ಎಳೆದು ತರುತ್ತವೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಬಿಬಿಎಂಪಿಗೆ ದೂರು ಕೊಡಿ ಅಂತ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದರು. ಈ ಕುರಿತು ಪಬ್ಲಿಕ್ ಟಿವಿ ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *