ಪತ್ರಿಕೆ, ಟಿವಿಗಳಲ್ಲಿ ಬಂದ್ರೆ ಮಾತ್ರ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯನವ್ರ ಅಸ್ತಿತ್ವವಿರುತ್ತದೆ: ಕಟೀಲ್

Public TV
2 Min Read

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಏನಾದರೂ ಮಾತನಾಡುತ್ತಾ ಇರುತ್ತಾರೆ. ಪತ್ರಿಕೆ ಟಿವಿಗಳಲ್ಲಿ ಅವರು ಬಂದರೆ ಮಾತ್ರ ಕಾಂಗ್ರೆಸ್ಸಿನಲ್ಲಿ ಅಸ್ತಿತ್ವವಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಕಟೀಲ್, ಸಿದ್ದರಾಮಯ್ಯ ಕಾಂಪಿಟೇಷನ್ ಗೆ ಬಿದ್ದಿದ್ದಾರೆ. ಅವರು ಮಾತನಾಡಲಿಲ್ಲ ಎಂದರೆ ಕಾಂಗ್ರೆಸ್ಸಿನಲ್ಲಿ ಕಳೆದು ಹೋಗುತ್ತಾರೆ. ಅವರಿಗೆ ಬಿಜೆಪಿ ಮೇಲೆ ಯಾವುದೇ ಕೋಪ ಇಲ್ಲ. ಕಾಂಗ್ರೆಸ್ ಎಂದರೆ ಬರೀ ಡಿಕೆಶಿ ಕಾಣುತ್ತಾರೆ, ಸಿದ್ದರಾಮಯ್ಯ ಕಾಣುವುದಿಲ್ಲ. ಹೀಗಾಗಿ ಡಿಕೆಶಿ ಅವರ ಮೇಲಿರುವ ಕೋಪದಿಂದ ಈ ರೀತಿ ಎಲ್ಲಾ ಮಾತನಾಡುತ್ತಾರೆ. ಪ್ರತಿನಿತ್ಯ ಟಿವಿಯಲ್ಲಿ ಕಾಣಿಸಿಕೊಳ್ಳಲು ಹೀಗೆ ಮಾತನಾಡುತ್ತಾರೆ. ನಾಯಕತ್ವದ ಜಗಳ ಬಿಜೆಪಿಯಲ್ಲಿ ಇಲ್ಲ, ಆದರೆ ಕಾಂಗ್ರೆಸ್ ನಲ್ಲಿ ಇದೆ ಎಂದಿದ್ದಾರೆ.

ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿಕೊಂಡಿದ್ದಾರೆ. ಬಾದಾಮಿಯಲ್ಲಿ 18 ಗ್ರಾಮ ಪಂಚಾಯತಿ ಗೆದ್ದಿದೆ, ಕಾಂಗ್ರೆಸ್ 8 ಗ್ರಾಮ ಪಂಚಾಯತಿ ಗೆದ್ದಿದೆ. ಇದರಿಂದ ಓಡೋಡಿ ಬಾದಾಮಿಗೆ ಸಿದ್ದರಾಮಯ್ಯ ಹೋಗಿದ್ದಾರೆ. ಗೋಹತ್ಯೆ ಸೇರಿದಂತೆ ಉಳಿದವುಗಳನ್ನು ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಯಾವುದನ್ನು ಬೇಕು ಅಂತ ವಿರೋಧ ಮಾಡೋದಿಲ್ಲ, ಆಸ್ತಿತ್ವಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಎಸ್ ಟಿ ಮೀಸಲಾತಿ ಹೋರಾಟದಲ್ಲಿ ಆರ್‍ಎಸ್‍ಎಸ್ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಆರ್ ಎಸ್ ಎಸ್ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಆರ್‍ಎಸ್‍ಎಸ್ ಎಲ್ಲಾ ಸಮುದಾಯಗಳನ್ನು ಒಂದು ಮಾಡುವ ಕೆಲಸವನ್ನು ಮಾಡುತ್ತದೆ. ಹೀಗಾಗಿ ಇದರ ಬಗ್ಗೆ ಅಪಪ್ರಚಾರ ಮಾಡೋದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಕಟುವಾಗಿ ಟಿಕೀಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಯಾರಿಗೂ ಸಚಿವರಾಗಬೇಕೆಂಬ ಅವಸರ ಇಲ್ಲ. ಮುಖ್ಯಮಂತ್ರಿಗಳ ಬಳಿ ಇರುವ 7 ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಎಲ್ಲಾ ಸಚಿವರು ಅವರವರ ಜವಬ್ದಾರಿ ಅರಿತು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಯಾರಿಗೂ ಅವಸರ ಇಲ್ಲ, ಜನಗಳಿಗೆ ಉತ್ತಮ ಆಡಳಿತವನ್ನು ಬಿಜೆಪಿ ನೀಡುತ್ತಿದೆ ಎಂದು ಹೇಳಿದ್ದಾರೆ.

ಸಿಎಂ ವಿರುದ್ಧ ಯತ್ನಾಳ್ ಬಹಿರಂಗ ಅಸಮಧಾನ ಹೊರ ಹಾಕಿದ ಹಿನ್ನೆಲೆ ರಾಷ್ಟ್ರೀಯ ಶಿಸ್ತು ಸಮಿತಿಗೆ ಮಾಹಿತಿ ನೀಡಿದ್ದೇವೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಯಾವ ಸ್ಥಳದಲ್ಲಿ ಏನು ಮಾತನಾಡಬೇಕು ಎನ್ನುವುದು ಇದೆ. ಸಿಎಂ ಬಿಎಸ್‍ವೈ ಅವರು ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಯಾರು ಕೂಡ ಪಕ್ಷದ ಹಾಗೂ ಸಿಎಂ ವಿರುದ್ಧ ಅಸಮಾಧಾನವಿಲ್ಲ. ಕೆಲ ಶಾಸಕರು ಅನುದಾನವನ್ನು ಕೇಳಿದ್ದಾರೆ. ಅವರಿಗೆ ಸಿಎಂ ಯಡಿಯೂರಪ್ಪ ನವರು ಕೋವಿಡ್ ಸಂದರ್ಭದ ಬಗ್ಗೆ ವಿವರಿಸಿದ್ದಾರೆ. ಏನೇ ಇದ್ದರೂ ಸಿಎಂ ಬಳಿ ಚರ್ಚೆ ಮಾಡಬೇಕು, ಇಲ್ಲ ನನ್ನ ಬಳಿ ಚರ್ಚೆ ಮಾಡಬೇಕು. ನಮ್ಮನ್ನು ಬಿಟ್ಟು ಹೊರಗಡೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *