ಪತ್ರಕ್ಕೆ ಸಹಿ ಹಾಕಿದ ನಾಯಕರಿಗಿಲ್ಲ ಸ್ಥಾನ, ಆಪ್ತರಿಗೆ ಮಣೆ – ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರಂಭ?

Public TV
1 Min Read

ನವದೆಹಲಿ: ಗಾಂಧಿ ಕುಟುಂಬವನ್ನು ಪ್ರಶ್ನಿಸಿದರೆ ಕಾಂಗ್ರೆಸ್‌ನಲ್ಲಿ ಅವರನ್ನು ಕಡೆಗಣಿಸಿ ಕೊನೆಗೆ ಮೂಲೆಗುಂಪು ಮಾಡಲಾಗುತ್ತದೆ ಎಂಬುದು ಈ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಈ ಮಾತಿಗೆ ಪೂರಕ ಎಂಬಂತೆ ಹೈಕಮಾಂಡ್‌ ನಾಯಕತ್ವ ಪ್ರಶ್ನಿಸಿ ಪತ್ರ ಬರೆದ ಹಿರಿಯ ನಾಯಕರ ಕಡೆಗಣನೆ ಆರಂಭವಾಗಿದೆ.

ರಾಜ್ಯಭಾ ಮತ್ತು ಲೋಕಸಭಾ ಕಲಾಪ ಸಂಬಂಧ ಸೋನಿಯಾ ಗಾಂಧಿ 5 ಮಂದಿ ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ಪತ್ರಕ್ಕೆ ಸಹಿ ಹಾಕಿದ ನಾಯಕರನ್ನು ಕಡೆಗಣಿಸಿ ಪತ್ರಕ್ಕೆ ಸಹಿ ಹಾಕದ ಆಪ್ತರಿಗೆ ಸ್ಥಾನ ನೀಡಲಾಗಿದೆ.

 

 

ರಾಜ್ಯಸಭೆ ಸಮಿತಿಯಲ್ಲಿ ತನ್ನ ನಂಬಿಕಸ್ಥರಾಗಿರುವ ಅಹಮದ್‌ ಪಟೇಲ್‌, ಕೆಸಿ ವೇಣುಗೋಪಾಲ್‌ ಅವರಿಗೆ ಸ್ಥಾನ ನೀಡಲಾಗಿದೆ. ಕರ್ನಾಟಕದಿಂದ ಆಯ್ಕೆ ಆಗಿರುವ ಜೈರಾಂ ರಮೇಶ್‌ ಅವರಿಗೆ ಮುಖ್ಯ ಸಚೇತಕ ಸ್ಥಾನವನ್ನು ನೀಡಲಾಗಿದೆ. ಇದನ್ನೂ ಓದಿ: ಆಂತರಿಕ ಚುನಾವಣೆ ನಡೆಯದಿದ್ದರೆ 50 ವರ್ಷ ನಾವು ವಿರೋಧ ಪಕ್ಷದಲ್ಲಿರಬೇಕಾಗುತ್ತದೆ – ಗುಲಾಂ ನಬಿ ಗುಡುಗು

ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಉಪನಾಯಕರಾಗಿರುವ ಕಾರಣಕ್ಕೆ ಗುಲಾಂ ನಬಿ ಆಜಾದ್‌ ಹಾಗೂ ಆನಂದ ಶರ್ಮಾ ಅವರನ್ನು ಮುಂದುವರಿಸಲಾಗಿದೆ. ಈ ಇಬ್ಬರು ಪತ್ರಕ್ಕೆ ಸಹಿ ಹಾಕಿದ್ದರೂ ಸದ್ಯಕ್ಕೆ ಯಾವುದೇ ಕ್ರಮ ಜರುಗಿಸಿಲ್ಲ.

ಕಾಂಗ್ರೆಸ್‌ ಪಕ್ಷವನ್ನು ಕಲಾಪಗಳಲ್ಲಿ, ನ್ಯಾಯಾಲಯದಲ್ಲಿ ಸದಾ ಸಮರ್ಥಿಸುತ್ತಿರುವ ಕಪಿಲ್‌ ಸಿಬಲ್‌ ಅವರಿಗೆ ಯಾವುದೇ ಹುದ್ದೆಯನ್ನೂ ನೀಡದೇ ಇರುವುದು ವಿಶೇಷವಾಗಿದೆ. ಮುಂಗಾರು ಅಧಿವೇಶನದ ಬಳಿಕ ಗುಲಾಂ ನಬಿ ಆಜಾದ್‌ ಹಾಗೂ ಶರ್ಮಾ ಹುದ್ದೆಗೂ ಕುತ್ತು ಬರಬಹುದು ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯ ಉಪನಾಯಕ ಸ್ಥಾನಕ್ಕೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ, ನೆಹರು- ಗಾಂಧಿ ಕುಟುಂಬದ ಆಪ್ತ ತರುಣ್‌ ಗೊಗೊಯ್‌ ಪುತ್ರ ಗೌರವ್‌ ಗೊಗೊಯ್‌ ಅವರನ್ನು ನೇಮಕ ಮಾಡಲಾಗಿದೆ. ಸಚೇತಕರನ್ನಾಗಿ ಪಂಜಾಬ್‌ನ ಸಂಸದ ರವನೀತ್‌ ಅವರನ್ನು ಸೋನಿಯಾ ನೇಮಕ ಮಾಡಿದ್ದಾರೆ.

ಹಿರಿಯ ಸಂಸದರಾದ ಮನೀಶ್‌ ತಿವಾರಿ, ಶಶಿ ತರೂರ್‌ ಈ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಆದರೆ ಇವರಿಬ್ಬರು ಪತ್ರಕ್ಕೆ ಸಹಿ ಹಾಕಿದ ಕಾರಣಕ್ಕೆ ಉತ್ತಮ ವಾಗ್ಮಿಗಳಾಗಿದ್ದರೂ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *