– ಆರ್ಥಿಕ ಸಮಸ್ಯೆಯೇ ಘಟನೆಗೆ ಕಾರಣ
ಲಕ್ನೋ: ಕಾರ್ ಗ್ಯಾರೇಜ್ ಮಾಲೀಕ ಹಾಗೂ ಆಸ್ತಿ ಡೀಲರ್, ಪತ್ನಿ ಹಾಗೂ ತನ್ನ ಮೂವರು ಮುದ್ದಾದ ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಬರಬಂಕಿ ಎಂಬಲ್ಲಿ ನಡೆದಿದೆ.
ಪತ್ನಿಯನ್ನು ಅನಾಮಿಕ ಶುಕ್ಲ(38), ಮಕ್ಕಳಾದ ರಿತು(7), ಪೊಯೆಮ್(10) ಹಾಗೂ ಬಬಲ್(5) ಎಂದು ಗುರುತಿಸಲಾಗಿದ್ದು, ಇವರನ್ನು ವಿವೇಕ್ ಶುಕ್ಲ(38) ಕೊಲೆಗೈದಿದ್ದಾನೆ. ಅಲ್ಲದೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಪತ್ನಿ ಮಕ್ಕಳ ಜೊತೆ ವಿವೇಕ್ ಮೇಲಿನ ಮಹಡಿಯಲ್ಲಿ ನೆಲೆಸಿದ್ದರೆ, ಕೆಳಗಡೆ ಹೆತ್ತವರು ಹಾಗೂ ಇಬ್ಬರು ಸಹೋದರರು ವಾಸ ಮಾಡುತ್ತಿದ್ದಾರೆ. ಮೇಲಿನ ಮಹಡಿಯಲ್ಲಿ ಏನೋ ವಾಸನೆ ಬರುತ್ತಿದೆ ಎಂದು ವಿವೇಕ್ ತಾಯಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ಹೋಗಿ ಮನೆಯ ಹೊರಗಿಂದ ನೋಡಿದಾಗ ವಿವೇಕ್ ಫ್ಯಾನಿಗೆ ನೇಣುಬಿಗುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಇದನ್ನು ಕಂಡು ಗಾಬರಿಗೊಂಡ ತಾಯಿ, ಕೂಡಲೇ ಕೆಳಗಡೆ ಬಂದು ತನ್ನ ಮಕ್ಕಳಿಗೆ ವಿಚಾರ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪಂಕಜ್ ಸಿಂಗ್ ಹೇಳಿದ್ದಾರೆ.
ಕೂಡಲೇ ಸಹೋದರ ಮೋಹಿತ್ ಮೇಲಿನ ಮಹಡಿಗೆ ಓಡಿದ್ದು, ರೂಮಿನ ಬಾಗಿಲು ಒಡೆದಾ ಅಚ್ಚರಿ ಕಾದಿತ್ತು. ಅಲ್ಲಿ ವಿವೇಕ್ ಮಾತ್ರವಲ್ಲದೇ ಆತನ ಕುಟುಂಬದ ಹೆಣವೇ ಬಿದ್ದಿತ್ತು. ತಕ್ಷಣ ಪೊಲೀಸರಿಗೂ ಮಾಹಿತಿ ತಿಳಿಸಿದ್ದಾರೆ.
ವಿವೇಕ್ ಮೊದಲು ತನ್ನ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಮೃತದೇಹದ ಮೇಲೆ ಚೂರಿಯಿಂದ ಇರಿದ ಹಾಗೂ ರಾಡ್ ನಿಂದ ಥಳಿಸಿದ ಗಾಯದ ಗುರುತುಗಳಿದ್ದವು. ಘಟನಾ ಸ್ಥಳದಲ್ಲಿ ಡೆತ್ ನೋಡ್ ಕೂಡ ಪತ್ತೆಯಾಗಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಈ ನಿಧಾರ ಕೈಗೊಂಡಿರುವುದಾಗಿ ಬರೆಯಲಾಗಿದೆ.