ಪತ್ನಿ, ಮಗಳನ್ನು ಸೌದಿಯಲ್ಲಿಯೇ ಬಿಟ್ಟು ಮಂಗ್ಳೂರಿಗೆ ಬಂದು ತಲಾಖ್ ನೀಡಿದ!

Public TV
1 Min Read

ಮಂಗಳೂರು: ದೇಶದಲ್ಲಿ ಮೂರು ವರ್ಷಗಳ ಹಿಂದೆ ತ್ರಿವಳಿ ತಲಾಖ್ ಅನ್ನು ನಿಷೇಧಿಸಿದ್ದರೂ ಹಲವು ಪ್ರಕರಣಗಳು ವಿವಿಧ ರಾಜ್ಯಗಳಿಂದ ಹೊರಬರುತ್ತಲೇ ಇವೆ. ಅಂತದ್ದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.

ಆರೋಪಿಯನ್ನು ಶೇಖ್ ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಕಳುಹಿಸುವ ಮೂಲಕ ತಲಾಖ್ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಸಲೀಂನನ್ನು ಶಿರ್ವದಲ್ಲಿ ಬಂಧಿಸಿದ್ದಾರೆ.

ಶಿರ್ವ ನಿವಾಸಿಯಾಗಿರುವ ಸಲೀಂ 2010ರಲ್ಲಿ ಸ್ವಪ್ನಾಜ್ ಎಂಬಾಕೆಯನ್ನು ವರಿಸಿದ್ದನು. ಈ ದಂಪತಿಗೆ ಹೆಣ್ಣು ಮಗಳೊಬ್ಬಳು ಕೂಡ ಇದ್ದು, ಕುಟುಂಬ ಸೌದಿ ಅರೇಬಿಯಾದಲ್ಲಿ ನೆಲೆಸಿತ್ತು. ಇದೇ ವರ್ಷ ಜುಲೈ ತಿಂಗಳಲ್ಲಿ ಪತ್ನಿ ಹಾಗೂ ಮಗಳನ್ನು ಸೌದಿಯಲ್ಲೇ ಬಿಟ್ಟು ಸಲೀಂ ಭಾರತಕ್ಕೆ ಬಂದಿದ್ದಾನೆ. ಈತನಿಗೆ ಅಕ್ರಮ ಸಂಬಂಧ ಇದೆ ಎಂಬ ಆರೋಪವೂ ಕೇಳಿ ಬಂದಿದೆ.

ಇತ್ತ ತಾಯ್ನಾಡಿಗೆ ಬಂದ ಬಳಿಕ ಸಲೀಂ ತನ್ನ ಪತ್ನಿಗೆ ಮೆಸೇಜ್ ಒಂದನ್ನು ಕಳುಹಿಸಿದ್ದಾನೆ. ಮೆಸೇಜ್ ನಲ್ಲಿ ನಾನು ನಿನಗೆ ತಲಾಖ್ ನೀಡಿರುವುದಾಗಿ ಬರೆದುಕೊಂಡಿದ್ದು, ಈ ಮೂಲಕ ತಲಾಖ್ ನೀಡಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾನೆ. ಅಲ್ಲದೆ ಮತ್ತೊಬ್ಬ ಮಹಿಳೆಯ ಜೊತೆ ಇದ್ದ ಫೋಟೋವನ್ನು ಕೂಡ ತನ್ನ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.

ಪತಿಯ ಇ-ಮೇಲ್ ಮಸೇಜ್ ನೋಡಿ ದಂಗಾದ ಸ್ವಪ್ನಾಜ್ ಕೂಡಲೇ ಪೊಲೀಸರಿಗೆ ಇ-ಮೇಲ್ ಮೂಲಕವೇ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಆರೋಪಿ ಸಲೀಂನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಕೋವಿಡ್ 19 ಟೆಸ್ಟ್ ಗೆ ಒಳಪಡಿಸಿ, ನೆಗೆಟಿವ್ ಎಂದು ವರದಿ ಬಂದ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *