ಕೋಲಾರ: ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರದ ಮುಳಬಾಗಿಲು ನಗರದ ಪಳ್ಳಿಗರ ಪಾಳ್ಯದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ನಾಗರಾಜ್ (35) ಕೊಲೆಯಾದ ವ್ಯಕ್ತಿ. ಅದೇ ಪ್ರದೇಶದ ಆರೋಪಿ ಅಪ್ಪಿ ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಅಪ್ಪಿ ಪತ್ನಿ ಜೊತೆಗೆ ಮೃತ ನಾಗರಾಜ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬರುತ್ತಿದ್ದು, ಸೋಮವಾರ ರಾತ್ರಿ ಇಸ್ಪೀಟ್ ಆಡುವಾಗ ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ಅಪ್ಪಿ ರಸ್ತೆಯಲ್ಲೇ ನಾಗರಾಜ್‍ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮಾಹಿತಿ ತಿಳಿದ ಮುಳಬಾಗಿಲು ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಅಪ್ಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.