ಪತಿ ವಿರುದ್ಧ ಪತ್ನಿ ದೂರು – ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ

Public TV
2 Min Read

– ಸಂಬಂಧಿಕರಿಂದ ಲಾಕಪ್ ಡೆತ್ ಆರೋಪ

ದಾವಣಗೆರೆ: ಮನೆಯಲ್ಲಿ ಮಗಳ ಹೆರಿಗೆ ಆಗಿತ್ತು. ಹೀಗಾಗಿ ತಾತನ ಹುದ್ದೆ ಬಡ್ತಿ ಪಡೆದಿದ್ದ ವ್ಯಕ್ತಿ, ತಮ್ಮ ಮೊಮ್ಮಕ್ಕಳ ಜೊತೆ ಆಟವಾಡಬೇಕಿದ್ದವ 19 ವರ್ಷದ ಯುವತಿಯ ಜೊತೆಗೆ ಲವ್ವಿಡವ್ವಿಯಾಡುತ್ತಿದ್ದ. ಇತ್ತ ಮಗಳಿಗೆ ಹೆರಿಗೆಯಾಗಿದೆ ಎಂದು ತಾಯಿ ನೋಡಲು ಹೋಗಿದ್ದೇ ತಡ ಅಂಕಲ್, 19 ವರ್ಷದ ಯುವತಿ ಜೊತೆ ಪರಾರಿಯಾಗಿದ್ದಾನೆ. ಇದೇ ವಿಚಾರಕ್ಕೆ ಈತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು, ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಸಂಜೆ ಠಾಣೆಗೆ ಹೋಗಿದ್ದವನು ಬೆಳಗಾಗುವಷ್ಟರಲ್ಲಿ ಶವವಾಗಿದ್ದಾನೆ.

ಹೌದು. ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಿಂದ ಕೇವಲ ಇಪ್ಪತ್ತು ಮೀಟರ್ ದೂರದಲ್ಲಿನ ಮೇಲಾಗಿ ರಾಜ್ಯ ಹೆದ್ದಾರಿ ಪಕ್ಕದ ಬಸ್ ನಿಲ್ದಾಣದಲ್ಲಿ ಮರುಳಸಿದ್ದಪ್ಪ ಮಲಗಿದ್ದ ಸ್ಥಿತಿಯಲ್ಲಿದ್ದರು. ನೋಡಿದವರು ಯಾರೋ ಕುಡಿದು ಹೆಚ್ಚಾಗಿ ಮಲಗಿರಬೇಕು ಅಂತ ತಿಳಿದು ಸುಮ್ಮನಾಗಿದ್ದರು. ಸಂಜೆ ಆಗುತ್ತಿದ್ದಂತೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ವಲ್ಪ ವಿಚಾರಿಸಿದಾಗ ಗೊತ್ತಾಗಿದ್ದು ನಿನ್ನೆ ರಾತ್ರಿ ಪ್ರಕರಣವೊಂದರ ವಿಚಾರವಾಗಿ ಪೊಲೀಸರು ಇವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು. ರಾತ್ರಿಯೆಲ್ಲಾ ಪೊಲೀಸ್ ಠಾಣೆಯಲ್ಲಿಯೇ ಇದ್ದ. ಸಂಬಂಧಿಕರು ಊಟ ಸಹ ತಂದು ಕೊಟ್ಟಿದ್ದರು.

46 ವರ್ಷದ ಮರಳಸಿದ್ದಪ್ಪ 19 ವರ್ಷದ ಯುವತಿಯನ್ನ ಕರೆದುಕೊಂಡು ಪರಾರಿಯಾಗಿದ್ದ. ಈ ಕಾರಣಕ್ಕೆ ಪತ್ನಿ ದೂರು ನೀಡಿದ್ದಳು. ತಾನು ಕೊಟ್ಟ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ಹೆಸರಿನಲ್ಲಿ ಪೊಲೀಸರು ಹಲ್ಲೆ ಮಾಡಿ ಸಾವನ್ನಪ್ಪಿದ ಬಳಿಕ ಇಲ್ಲಿ ಹಾಕಿ ಹೋಗಿದ್ದಾರೆ ಎಂಬುದು ಕುಟುಂಬ ಸದಸ್ಯರ ಆರೋಪ ಮಾಡುತ್ತಿದ್ದಾರೆ.

ಮಾಯಕೊಂಡದ ಬಳಿಯ ವಿಠ್ಠಲಾಪುರ ಗ್ರಾಮದ ನಿವಾಸಿ ಮರುಳಸಿದ್ದಪ್ಪ ಸಾವಿನ ಸುದ್ದಿ ತಿಳಿದು ನೂರಾರು ಜನ ಪೊಲೀಸ್ ಠಾಣೆ ಎದುರು ಸೇರಿದರು. ಅಲ್ಲಿಂದ ಶವ ಎತ್ತುವುದಿಲ್ಲ ಎಂದು ಪಟ್ಟು ಹಿಡಿದರು. ಮೇಲಾಗಿ ಪೊಲೀಸ್ ಠಾಣೆಯಲ್ಲಿ ಆರು ಕಡೆ ಸಿಸಿ ಕ್ಯಾಮೆರಾಗಳಿವೆ. ಈತ ಎಷ್ಟು ಸಮಯಕ್ಕೆ ಪೊಲೀಸ್ ಠಾಣೆಗೆ ಬಂದಿದ್ದ. ಆತ ಯಾವಾಗ ಪೊಲೀಸ್ ಠಾಣೆಯಿಂದ ಹೊರ ಹೋದ ಎಂಬುದನ್ನ ಸ್ಪಷ್ಟಪಡಿಸುವಂತೆ ಸಂಬಂಧಿಕರು ಪಟ್ಟು ಹಿಡಿದರು. ಹೀಗೆ ಪರಿಸ್ಥಿತಿ ನಿಯಂತ್ರಣ ತಪ್ಪುವುದನ್ನ ಅರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಯ ವಿಚಾರಣೆ ಮಾಡಿದರು. ಇದೊಂದು ಅನುಮಾನಾಸ್ಪದ ಸಾವು. ಸಾವಿಗೆ ಕಾರಣ ತಿಳಿದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಸ್ಪಷ್ಟ ಪಡಿಸಿದರು.

ಪೊಲೀಸ್ ವಿಚಾರಣೆಗೆ ಹಾಜರಾಗಿ ಜೊತೆಗೆ ರಾತ್ರಿ ಪೊಲೀಸ್ ಠಾಣೆಯಲ್ಲಿಯೇ ಇದ್ದು, ಬೆಳಗ್ಗೆ ಆರು ಗಂಟೆಗೆ ಪೊಲೀಸ್ ಠಾಣೆಯಲ್ಲಿ ಇದ್ದ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಇಡೀ ಪ್ರಕರಣ ಪೊಲೀಸರತ್ತ ಸುತ್ತಲು ಶುರುವಾಗಿದೆ. ಜೊತೆಗೆ ರಾತ್ರಿ ಸೇವೆಯಲ್ಲಿದ್ದ ಸಿಬ್ಬಂದಿಯನ್ನ ವಿಚಾರಣೆ ಮಾಡಲಾಗಿದೆ. ನಂತರ ಈ ಪ್ರಕರಣದ ಬಗ್ಗೆ ಪೂರ್ವ ವಲಯ ಐಜಿಪಿ ರವಿ ಅವರು ಗಂಭೀರ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಎಲ್ಲರ ಚಿತ್ತ ವೈದ್ಯಕೀಯ ವರದಿಯತ್ತ ಇದೆ.

Share This Article
Leave a Comment

Leave a Reply

Your email address will not be published. Required fields are marked *