ಪತಿ ಜಗಳ ಮಾಡಲ್ಲ, ಹೆಚ್ಚು ಪ್ರೀತಿಸ್ತಾನೆ- ನಂಗೆ ವಿಚ್ಛೇದನ ಕೊಡಿಸಿ

Public TV
2 Min Read

– ವಿವಾಹವಾಗಿ 18 ತಿಂಗಳಲ್ಲೇ ಮಹಿಳೆ ವಿಚ್ಛೇನಕ್ಕೆ ಅರ್ಜಿ
– ಅಡುಗೆ ಮಾಡ್ತಾನೆ, ಕೆಲಸದಲ್ಲಿ ಸಹಾಯ ಮಾಡ್ತಾನೆ ಇದನ್ನು ಸಹಿಸಲಾಗುತ್ತಿಲ್ಲ
– ತಪ್ಪು ಮಾಡಿದರೂ ಪತಿ ಏನೂ ಬೈಯಲ್ಲ, ಸಿಟ್ಟಾಗಲ್ಲ

ಲಕ್ನೋ: ಪತಿ ಹೆಚ್ಚು ಕುಡಿಯುತ್ತಾನೆ, ಜಗಳವಾಡುತ್ತಾನೆಂದು ವಿಚ್ಛೇದನ ಕೇಳುವ ಮಹಿಳೆಯರ ಸುದ್ದಿಯನ್ನು ನೀವು ಓದಿರಬಹುದು. ಆದರೆ ಇಲ್ಲೊಬ್ಬ ಮಹಿಳೆ ಪತಿ ಜಗಳವಾಡಲ್ಲ, ಹೆಚ್ಚು ಪ್ರೀತಿಸುತ್ತಾನೆ ವಿಚ್ಛೇದನ ಬೇಕೆಂದು ಕೋರ್ಟ್ ಮೊರೆ ಹೋಗಿದ್ದಾಳೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತನ್ನ ಪತಿ ಜಗಳವಾಡಲ್ಲ, ಹೆಚ್ಚು ಪ್ರೀತಿಸುತ್ತಾನೆ ಎಂಬ ಕಾರಣಕ್ಕೆ ವಿವಾಹವಾಗಿ 18 ತಿಂಗಳಲ್ಲೇ ಮಹಿಳೆ ವಿಚ್ಛೇದನದ ಮೊರೆ ಹೋಗಿದ್ದಾರೆ. ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ವಿಚ್ಛೇದನಕ್ಕೆ ಕಾರಣ ಕೇಳಿದಾಗ ಪತಿ ಜಗಳವಾಡುವುದಿಲ್ಲ, ಹೆಚ್ಚು ಪ್ರೀತಿಸುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೇಳಿ ಸ್ವತಃ ನ್ಯಾಯಾಧೀಶರೇ ಕಕ್ಕಾಬಿಕ್ಕಿಯಾಗಿದ್ದು, ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ ಎಂದು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ ಸುಮ್ಮನಾಗದ ಮಹಿಳೆ, ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚಿಸಿದ್ದು, ಆಗ ಊರಿನ ಮುಖಂಡರು ಸಹ ಅಸಮರ್ಥತೆಯನ್ನು ಹೊರ ಹಾಕಿದ್ದಾರೆ.

ಮಹಿಳೆ ಇತ್ತೀಚೆಗೆ ಶರಿಯಾ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದು, ಪತಿಯ ಪ್ರೀತಿಯನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ. ವಿವಾಹವಾಗಿ 18 ತಿಂಗಳು ಕಳೆದರೂ, ಈ ವರೆಗೆ ಪತಿಯೊಂದಿಗೆ ಒಂದು ಬಾರಿಯೂ ಜಗಳವಾಡಿಲ್ಲ ಎಂದು ವರದಿಯಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ.

ನಾನು ಯಾವಾಗಲೂ, ಯಾವುದೇ ತಪ್ಪು ಮಾಡಿದರೂ, ಏನೂ ಅನ್ನುವುದಿಲ್ಲ, ಕ್ಷಮಿಸಿಬಿಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಸುಮ್ಮನಿರುತ್ತಾನೆ. ಎಲ್ಲದಕ್ಕೂ ಪತಿ ಒಪ್ಪಿಗೆ ಸೂಚಿಸುವ, ಸಹಿಸಿಕೊಳ್ಳುವ ಪತಿಯೊಂದಿಗೆ ಸಂಸಾರ ನಡೆಸುವ ಅಗತ್ಯ ನನಗಿಲ್ಲ ಎಂದು ಮಹಿಳೆ ವಿವರಿಸಿದ್ದಾಳೆ.

ಈ ವೇಳೆ ಕೋರ್ಟ್, ಈ ಕಾರಣಗಳನ್ನು ಹೊರತುಪಡಿಸಿ ವಿಚ್ಛೇದನ ಪಡೆಯಲು ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ಪ್ರಶ್ನಿಸಿದ್ದು, ಬೇರೆ ಯಾವುದೇ ಕಾರಣವಿಲ್ಲ ಎಂದು ಮಹಿಳೆ ತಿಳಿಸಿದ್ದಾಳೆ.

ಇದಕ್ಕೆ ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದು, ಪತ್ನಿಯನ್ನು ಯಾವಾಗಲೂ ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕೆಂಬುದು ನನ್ನ ಆಸೆ. ಹೀಗಾಗಿ ಪ್ರಕರಣವನ್ನು ವಜಾಗೊಳಿಸಿ ಎಂದು ಶರಿಯಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪರಸ್ಪರ ಇಬ್ಬರೂ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ತಿಳಿಸಿ ಕೋರ್ಟ್ ಅರ್ಜಿ ವಜಾಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *