ಪತಿಯಿಂದ ದೂರವಾದ್ಳು – ಪ್ರೀತಿಸಿದ ಯುವಕ ಕೈ ಕೊಟ್ಟ

Public TV
2 Min Read

– ಕಣ್ಣೀರಿನಲ್ಲಿ ಜೀವನ ನಡೆಸುತ್ತಿರುವ ಮಹಿಳೆ

ಚಾಮರಾಜನಗರ: ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಸಂಸಾರದ ನೌಕೆ ಹೊತ್ತ ಯುವತಿ, ಮದುವೆಯಾದ 5 ವರ್ಷದಲ್ಲೇ ಗಂಡನಿಂದ ದೂರವಾಗಿ ತವರು ಮನೆ ಸೇರಿ ಹೆಣ್ಣು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದಳು. ಹೀಗಿರುವಾಗಲೇ ಯುವಕನೊಬ್ಬ ಜೀವನ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದು, ಯುವತಿ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾಳೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಅಮಚವಾಡಿ ಗ್ರಾಮದ ಪುಷ್ಪಾ, 14ನೇ ವಯಸ್ಸಿನಲ್ಲಿ ತನ್ನ ತಾಯಿ ಕಳೆದುಕೊಂಡು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಳು. ಅಷ್ಟರಲ್ಲಾಗಲೇ ಪುಷ್ಪಾಳ ತಂದೆ ತಾಯಿ ಇಲ್ಲದವಳನ್ನು ಯಾರೂ ಮದುವೆಯಾಗುವುದಿಲ್ಲವೆಂದು 14ನೇ ವಯಸ್ಸಿಗೇ ನಂಜನಗೂಡಿನ ಬದನಗುಪ್ಪೆ ಗ್ರಾಮದ ಕೃಷ್ಣ ನಾಯಕ ಎಂಬವನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಶಾಲೆ, ಕಾಲೇಜು ಹೀಗೆ ಬಾಲ್ಯದ ದಿನಗಳನ್ನ ಕಳೆಯಬೇಕಿದ್ದ ಪುಷ್ಪಾಳಿಗೆ ಸಂಸಾರ ನಿಭಾಯಿಸುವುದು ಕಷ್ಟವಾಗಿರುತ್ತದೆ. ಅಷ್ಟೊತ್ತಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪುಷ್ಟಾ, ಗಂಡನ ಜೊತೆ ಸಂಸಾರ ಮಾಡಲು ಸಾಧ್ಯವಾಗದೇ ಮದುವೆಯಾದ ಐದೇ ವರ್ಷಕ್ಕೆ ಗಂಡನಿಂದ ದೂರವಾಗಿ ತವರು ಮನೆ ಸೇರಿಕೊಳ್ಳುತ್ತಾಳೆ.

ಮಗುವನ್ನು ಸಾಕಲು ಚಾಮರಾಜನಗರದ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾಳೆ. ಈ ವೇಳೆ ಮಹೇಶ್ ಪರಿಚಯವಾಗುತ್ತದೆ. ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಪುಷ್ಪಾಳ ಎಲ್ಲ ವಿಚಾರವನ್ನು ಚೆನ್ನಾಗಿ ತಿಳಿದುಕೊಂಡು ಬಾಳು ಕೊಡುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ತನ್ನ ಅಜ್ಜಿಯೊಂದಿಗೆ ತವರು ಮನೆಯಲ್ಲಿ ಜೀವನ ನಡೆಸುತ್ತಿದ್ದ ಪುಷ್ಪಾಳನ್ನ ಚಾಮರಾಜನಗರ ಪಟ್ಟಣಕ್ಕೆ ಕರೆಸಿಕೊಂಡ ಮಹೇಶ್, ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಲೈಂಗಿಕವಾಗಿ ಬಳಸಿಕೊಂಡ ನಂತರ ಮದುವೆಯಾಗುವಂತೆ ಪುಷ್ಪಾ ಪೀಡಿಸಿದಾಗಲೆಲ್ಲ ಇಂದು, ನಾಳೆ ಎಂದು ಕಥೆ ಹೇಳುತ್ತಿದ್ದ.

ಪುಷ್ಪಾ ನಾಲ್ಕು ತಿಂಗಳ ಗರ್ಭವತಿಯಾದಾಗ ಹೆದರಿ ಮಗು ತೆಗೆಸುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಪುಷ್ಪಾ ಒಪ್ಪುವುದಿಲ್ಲ. ಬಳಿಕ ತಮಿಳುನಾಡಿಗೆ ಪ್ರವಾಸ ಕರೆದುಕೊಂಡು ಹೋದ ಮಹೇಶ್, ಮತ್ತು ಬರುವ ಔಷಧಿ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಅಪರೇಷನ್ ಮಾಡಿಸಿಕೊಂಡು ಮೈಸೂರಿಗೆ ಕರೆದುಕೊಂಡು ಹೋಗುತ್ತಾನೆ. ದಿನನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಮಹೇಶ್ ಬೇರೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಗಿದೆ.

ತಕ್ಷಣ ನ್ಯಾಯ ಕೊಡಿಸುವಂತೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪುಷ್ಪಾ ದೂರು ದಾಖಲಿಸುತ್ತಾಳೆ. ಪೊಲೀಸರು ಮಹೇಶ್ ನನ್ನ ಕರೆಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ. ಇತ್ತ ಗಂಡನಿಂದ ದೂರವಾದ ಪುಷ್ಪಾ ಸಾಕಷ್ಟು ಕಷ್ಟ ಅನುಭವಿಸಿದ್ದು, ಪ್ರಿಯಕರ ಮಹೇಶ್ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ಕಣ್ಣೀರುಡುತ್ತಿದ್ದಾಳೆ. ಸದ್ಯ ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕುಟುಂಬದ ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆದಿದ್ದಾಳೆ. ಗಂಡನಿಂದ ದೂರವಾಗಿದ್ದ ಪುಷ್ಪಾಳಿಗೆ ಪ್ರಿಯಕರ ಮಹೇಶ್ ಬಾಳು ಕೊಡುವ ಭರವಸೆ ಕೊಟ್ಟು ಗಾಯದ ಮೇಲೆ ಮತ್ತೆ ಬರೆ ಎಳೆದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *