ಪತಂಜಲಿ ಕೊರೊನಾ ಔಷಧಿ ಜಾಹೀರಾತಿಗೆ ಆಯುಷ್ ಸಚಿವಾಲಯದ ಬ್ರೇಕ್

Public TV
2 Min Read

– ಅಧ್ಯಯನಕ್ಕೆ ಸಂಬಂಧಿಸಿದ ಡೇಟಾ ಸಲ್ಲಿಸಲು ಸೂಚನೆ

ನವದೆಹಲಿ: ಕೋವಿಡ್-19 ಸೋಂಕಿಗೆ ಯೋಗಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಸಂಸ್ಥೆ ಆಯುರ್ವೇದ ಔಷಧಿಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಆಯುಷ್ ಸಚಿವಾಲಯ ಬ್ರೇಕ್ ಹಾಕಿದ್ದು, ಈ ಕುರಿತು ಜಾಹೀರಾತು ಪ್ರಸಾರ ನಿಲ್ಲಿಸುವಂತೆ ಹೇಳಿದೆ. ಅಲ್ಲದೇ ಔಷಧಿಯ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಪತಂಜಲಿ ಸಂಸ್ಥೆಗೆ ಸೂಚನೆ ನೀಡಿದೆ.

ಪತಂಜಲಿ ಸಂಸ್ಥೆಯ ಔಷಧಿಯ ವಿವರಗಳು ಅಥವಾ ಹಕ್ಕುಗಳ ಕುರಿತ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಆಯುಷ್ ಸಚಿವಾಲಯ ಹೇಳಿದೆ. ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಿರುವ ಔಷಧಿಗಳ ಹೆಸರು ಮತ್ತು ಸಂಯೋಜನೆಯ ಆರಂಭಿಕ ವಿವರಗಳನ್ನು ನೀಡಲು ಪತಂಜಲಿ ಸಂಸ್ಥೆಗೆ ಕೇಳಲಾಗಿದೆ. ಯಾವ ಆಸ್ಪತ್ರೆ ಮತ್ತು ಸ್ಥಳದಲ್ಲಿ ಈ ಕುರಿತು ಸಂಶೋಧನಾ ಅಧ್ಯಯನ ನಡೆಸಲಾಯಿತು. ನಿಯಮಗಳು, ಸಂಶೋಧನೆಯ ಮಾದರಿಯ ಗಾತ್ರ, ನಿಗದಿತ ಇಲಾಖೆಯಿಂದ ಅನುಮತಿ ಹಾಗೂ ಸಿಟಿಆರ್‍ಐ ನೋಂದಣಿ ಮತ್ತು ಅಧ್ಯಯನದ ಫಲಿತಾಂಶಗಳ ಮಾಹಿತಿಯನ್ನು ಪರಿಶೀಲನೆ ನಡೆಸುವವರೆಗೂ ಯಾವುದೇ ಜಾಹೀರಾತು ಅಥವಾ ಪ್ರಚಾರ ಮಾಡುವುದನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ಪತ್ರಿಕಾ ಪ್ರಕಟನೆಯಲ್ಲಿ ವಿವರಿಸಲಾಗಿದೆ.

ಇದಕ್ಕೂ ಮುನ್ನ ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿ ಮಾತನಾಡಿದದ ಬಾಬಾ ರಾಮ್‍ದೇವ್ ಅವರು, ಕೊರೊನಿಲ್ ಮತ್ತು ಸಸ್ವರಿ ಹೆಸರಿನ ಎರಡು ಔಷಧಿ ಸೇವಿಸಿದರೆ 7 ದಿನದಲ್ಲಿ ಕೊರೊನಾ ಗುಣವಾಗುತ್ತದೆ. ರೋಗಿಗಳು ಸಂಪೂರ್ಣವಾಗಿ ಗುಣವಾಗುತ್ತಾರೆ ಎಂದು ಶೇ.100 ರಷ್ಟು ಭರವಸೆ ನೀಡುತ್ತೇನೆ ಎಂದು ಹೇಳಿದ್ದರು. ಪತಂಜಲಿ ಸಂಶೋಧನಾ ಕೇಂದ್ರ ಮತ್ತು ಜೈಪುರದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ನಿಮ್ಸ್) ಜೊತೆ ಜಂಟಿಯಾಗಿ ಕ್ಲಿನಿಕಲ್ ಟ್ರಯಲ್ ಮಾಡಲಾಗಿದೆ. 3 ರಿಂದ 7 ದಿನದ ಒಳಗಡೆ ರೋಗಿಗಳು ಶೇ.100ರಷ್ಟು ಗುಣಮುಖರಾಗುತ್ತಾರೆ ಎಂದು ಪತಂಜಲಿ ಸಂಸ್ಥೆ ತಿಳಿಸಿತ್ತು.

ಕೊರೊನಾ ಕಿಟ್ ವಿತರಣೆ ಸಂಬಂಧ ಒಂದು ಅಪ್ಲಿಕೇಶನ್ ಬಿಡುಗಡೆ ಮಾಡಲಾಗುವುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಿಲ್ಲ. ಬದಲಾಗಿ ಕೊರೊನಾವನ್ನು ಗುಣಪಡಿಸುತ್ತದೆ. ಶೇ.69 ರಷ್ಟು ರೋಗಿಗಳು 6 ದಿನದಲ್ಲಿ ಗುಣವಾಗಿದ್ದಾರೆ. ನಾವು ಸಂಶೋಧನೆ ಮಾಡಿಯೇ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ಪ್ರತಿ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿದೆ ಎಂದು ಬಾಬಾ ರಾಮ್‍ದೇವ್ ತಿಳಿಸಿದ್ದರು.

ಸದ್ಯ ಪತಂಜಲಿ ಬಿಡುಗಡೆ ಮಾಡಿರುವ ಕೊರೊನಾ ಕಿಟ್ ಬೆಲೆ 545 ರೂ. ಇದ್ದು, 30 ದಿನಗಳ ಕಾಲ ಬಳಸಬಹುದಾಗಿದೆ. ಸದ್ಯಕ್ಕೆ ಈ ಔಷಧಿ ಎಲ್ಲಿಯೂ ಸಿಗುವುದಿಲ್ಲ. ಒಂದು ವಾರದಲ್ಲಿ ಪತಂಜಲಿ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಮುಂದಿನ 4-5 ದಿನದಲ್ಲಿ ಈ ಅಧ್ಯಯನಕ್ಕೆ ಸಂಬಂಧಿಸಿದ ಡೇಟಾವನ್ನು ರಿಲೀಸ್ ಮಾಡುತ್ತೇವೆ ಎಂದು ಪತಂಜಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *