ಪಠ್ಯ ಕಡಿತ ಅಂತಿಮವಾಗಿಲ್ಲ, ಗೊಂದಲ ಬೇಡ: ಸುರೇಶ್ ಕುಮಾರ್

Public TV
1 Min Read

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿ ವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿದೆ. ಹೀಗಾಗಿ ಪಠ್ಯಕ್ರಮವನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ಮಾಡಲಾಗುವ ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸರ್ಕಾರದಿಂದ ಪಠ್ಯ ಪುಸ್ತಕಗಳ ಕೇಸರೀಕರಣ: ಸಿದ್ದರಾಮಯ್ಯ

ಈ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗಬಹುದಾದ ಬೋಧನಾ ಅವಧಿ, ಸಮೂಹ ಮಾಧ್ಯಮಗಳು ಅಥವಾ ತಂತ್ರಜ್ಞಾನಾಧಾರಿತ ಬೋಧನೆಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬಹುದಾದ ಪಠ್ಯಗಳನ್ನು ಗುರುತಿಸಿ ಇಲಾಖೆಯ ತಂತ್ರಜ್ಞಾನಾಧಾರಿತ ಕಲಿಕಾ ನೀತಿಗನುಗುಣವಾಗಿ ಪಠ್ಯ ಬೋಧನೆಯ ಮಾದರಿಗಳನ್ನು ರಚನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಎಲ್ಲ ಕ್ರಮಗಳು ಅಂತಿಮಗೊಳ್ಳುವ ಪೂರ್ವದಲ್ಲಿಯೇ ಅಚಾತುರ್ಯದಿಂದ ಇಲಾಖೆಯ ಜಾಲತಾಣದಲ್ಲಿ ಅನುಮೋದಿತವಾಗದ ಪಠ್ಯಾಂಶಗಳನ್ನು ಪ್ರಕಟಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ಹೊರತು ಕೆಡವುವ ಕೆಲಸ ಮಾಡುವುದಿಲ್ಲ. ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ ಎಂದು ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *