ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

Public TV
2 Min Read

ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ತನ್ವೀರ್ ಸೇಠ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಮೈಸೂರು ಪಾಲಿಕೆ ಚುನಾವಣೆ ವೇಳೆ ಜೆಡಿಎಸ್ ಜೊತೆಗಿನ ಮೈತ್ರಿ ನಿರ್ಧಾರ ನನ್ನದು. 1983ರಿಂದ ಇಲ್ಲಿಯವರೆಗೂ ಬಿಜೆಪಿಗೆ ಮೈಸೂರು ಗದ್ದುಗೆ ಸಿಗದಂತೆ ನೋಡಿಕೊಳ್ಳಲಾಗಿದೆ. ಕೊನೆ ಕ್ಷಣದಲ್ಲಿ ಜೆಡಿಎಸ್‍ಗೆ ಬೆಂಬಲ ಸೂಚಿಸಿ ಬಿಜೆಪಿಯನ್ನ ಅಧಿಕಾರದಿಂದ ದೂರವಿರುವಂತೆ ನೋಡಿಕೊಳ್ಳಲಾಗಿದೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷ ಕುಂಠಿತಗೊಳಿಸುವ ಕೆಲಸ: ಮಾಧ್ಯಮಗಳ ಮೂಲಕ ಪಕ್ಷದಿಂದ ನೋಟಿಸ್ ಬಂದಿದೆ ಎಂದು ತಿಳಿದಿದೆ. ಆದ್ರೆ ಅಧಿಕೃತವಾಗಿ ನನಗೆ ನೋಟಿಸ್ ತಲುಪಿಲ್ಲ. ನೋಟಿಸ್ ಬಂದ್ರೆ ಉತ್ತರಿಸಲು ಸಿದ್ಧನಿದ್ದೇನೆ. ಸದನದಲ್ಲಿ ನಮ್ಮ ಬಳಿ ಮೊಬೈಲ್ ಬಳಸಲು ಸಾಧ್ಯ ಇರಲಿಲ್ಲ. ಈ ಹಿಂದೆ ವಿಪ್ ಉಲ್ಲಂಘನೆ ಮಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಪಕ್ಷವನ್ನ ಕುಂಠಿತಗೊಳಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ನೋಟಿಸ್ ನಲ್ಲಿರುವ ಅಂಶಗಳನ್ನ ಗಮನಿಸಿ ಉತ್ತರ ನೀಡುತ್ತೇನೆ ಎಂದು ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ಹೊರ ಹಾಕಿದರು.

ಸಮರ್ಥಿಸಿಕೊಳ್ಳುವ ಧೈರ್ಯ ನನ್ನಲಿದೆ: ಚುನಾವಣೆಗೂ ಮುನ್ನ ಎಲ್ಲರ ಜೊತೆ ಮಾತನಾಡಿದ್ದೇನೆ. ಸದನದಲ್ಲಿದ್ದಾಗ ಸಿದ್ದರಾಮಯ್ಯನವರ ಕರೆ ಬಂದಿರೋದು ನಿಜ. ಚುನಾವಣೆ ಬಳಿಕ ನನ್ನ ವರದಿಯನ್ನ ಧೃವನಾರಾಯಣ್ ವರಿಗೆ ಸಲ್ಲಿಸಿದ್ದೇನೆ. ಇವರೆಗೂ ಯಾರ ಜೊತೆ ಮಾತನಾಡಿಲ್ಲ. ಜೆಡಿಎಸ್ ಜೊತೆಗಿನ ಬಗ್ಗೆ ಯಾರಿಗೆ ಏನು ಅಸಮಾಧಾನವಿದೆ ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ ಪಕ್ಷದ ಕೆಲಸ ಮಾಡಿದ್ದು, ಒಪ್ಪಿಕೊಳ್ಳುವ ಮತ್ತು ಸಮರ್ಥಿಸಿಕೊಳ್ಳುವ ಧೈರ್ಯ ನನ್ನಲಿದೆ ಎಂದರು.

ಉತ್ತರ ಕೊಡುತ್ತೇನೆ: ಜೆಡಿಎಸ್ ನಾಯಕರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ. ರಾಜಕಾರಣದಲ್ಲಿ ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಮೈಸೂರು ಪಾಲಿಕೆ ಚುನಾವಣೆ ಸಾಕ್ಷಿಯಾಗಿದೆ. ಯಾರೇ ಸ್ಪಷ್ಟನೆ ಕೇಳಿದ್ರೂ ನಾನು ಉತ್ತರ ಕೊಡುತ್ತೇನೆ. ನನಗೆ ನೀಡಿದ ಜವಾಬ್ದಾರಿಯನ್ನ ನಿಭಾಯಿಸಿದ್ದೇನೆ ಅನ್ನೋ ತೃಪ್ತಿಗೆ ನನಗಿದೆ. ಮೊದಲಿಗೆ ಜೆಡಿಎಸ್ ಜೊತೆ ಮಾತನಾಡಲು ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯರು ಸೂಚಿಸಿದ್ದರು ಎಂದು ಹೇಳಿದರು.

ರಾಜೀನಾಮೆ ಎಚ್ಚರಿಕೆ: ಇತ್ತ ಚುನಾವಣೆ ಯಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿಸಲು ಕಾರಣರಾದ ತನ್ವೀರ್ ಸೇಠ್ ಗೆ ಪಕ್ಷದಿಂದ ನೋಟಿಸ್ ಬಂದರೆ ಸಾಮಾಹಿಕ ರಾಜೀನಾಮೆಗೆ ಎನ್.ಆರ್. ಕ್ಷೇತ್ರದ ವಿವಿಧ ಬ್ಲಾಕ್ ಗಳ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ತನ್ವೀರ್ ಸೇಠ್ ಮನೆ ಮುಂದೆ ತಮ್ಮದೆ ಪಕ್ಷದ ನಾಯಕರ ವಿರುದ್ದ ಕಾರ್ಯಕರ್ತರು ಪ್ರತಿಭಟಿಸಿದರು.

Share This Article
Leave a Comment

Leave a Reply

Your email address will not be published. Required fields are marked *