ವಿಜಯಪುರ: ನೈಟ್ ಕರ್ಫ್ಯೂ ಜಾರಿ ಗೊಂದಲದ ಗೂಡಾಗಿದೆ. ಇದನ್ನ ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕೊರೋನಾ ಹೆಚ್ಚಾಗುತ್ತಾ, ಹಗಲು ಹೆಚ್ಚಾಗುತ್ತಾ ಗೊತ್ತಿಲ್ಲ. ರಾತ್ರಿ ವೇಳೆ ಸಾಮಾನ್ಯವಾಗಿ ಯಾರೂ ಓಡಾಡಲ್ಲ. ಆಗ ಕರ್ಫ್ಯೂ ಮಾಡಿ ಏನು ಪ್ರಯೋಜನ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನ ಸಿಎಂ ಮರುಪರಿಶೀಲಿಸಬೇಕು. ಈ ರೀತಿ ಅರ್ಧಂಬರ್ಧ ಮಾಡುವ ಬದಲು ಅದನ್ನ ತೆಗೆದು ಹಾಕಬೇಕು ಎಂಬುದು ನನ್ನ ವೈಯಕ್ತಿ ಅಭಿಪ್ರಾಯ ಎಂದರು.
ರಾತ್ರಿ ಕರ್ಫ್ಯೂನಿಂದ ಪಾರ್ಟಿ ತಪ್ಪಿಸಬಹುದು ಎಂಬ ಸಚಿವ ಸುಧಾಕರ ಹೇಳಿಕೆಗೆ ಟಾಂಗ್ ಕೊಟ್ಟ ರೆಬಲ್ ಶಾಸಕ, ಹಾಗಿದ್ದರೆ ಕೇವಲ ಪಾರ್ಟಿಗಳನ್ನು ನಿಷೇಧಿಸಲಿ. ಮೂರು ಗಜದ ಅಂತರವಿರಲಿ, ಮಾಸ್ಕ್ ಇರಲಿ ಎಂದು ಹೇಳುತ್ತಾರೆ. ರಾತ್ರಿ ಎಲ್ಲರೂ ಮೂರು ಗಜ ಅಂತರದಲ್ಲಿಯೇ ಮಲಗುತ್ತಾರೆ ಎಂದರು.
ರಾತ್ರಿ ವೇಳೆ ಸಾಮಾನ್ಯವಾಗಿಯೇ ಯಾರೂ ಹೊರಗೆ ಬರುವುದಿಲ್ಲ. ಮಾಧ್ಯಮಗಳೂ ಈ ಕುರಿತು ಟೀಕಿಸಿವೆ. ಈ ನಿರ್ಣಯಕ್ಕೆ ಬೆಲೆಯೇ ಇಲ್ಲ. ರಾತ್ರಿ ಪೊಲೀಸರಿಗೆ ತೊಂದರೆ ನೀಡಲು, ಸಾರ್ವಜನಿಕರೊಂದಿಗೆ ಪೊಲೀಸರು ಜಗಳವಾಡಲು ಇಂತಹ ನಿರ್ಣಯಗಳು ಕಾರಣವಾಗುತ್ತವೆ ಎಂದು ಕಿಡಿ ಕಾರಿದರು.