ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ಹೋಮ ಶುರು – ಡಿಕೆಶಿ ಭಾಗಿ

Public TV
2 Min Read

– 8 ಬಗೆಯ ಹೋಮ ನಡೆಸಲಿದ್ದಾರೆ ಕೆಪಿಸಿಸಿ ಅಧ್ಯಕ್ಷ
– ಎಲ್ಲರ ಒಳಿತಿಗಾಗಿ ಹೋಮ

ಬೆಂಗಳೂರು: ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ಹೋಮ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಮದಲ್ಲಿ ಭಾಗಿಯಾಗಿದ್ದಾರೆ.

ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದಲ್ಲಿ ಮೂವರು ಅರ್ಚಕರಿಂದ ಹೋಮ ನಡೆಯುತ್ತಿದೆ. ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಡೆಯಲಿದೆ.

ನೂತನ ಆಡಿಟೋರಿಯಂ ಉದ್ಘಾಟನೆ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಹಿನ್ನೆಲೆಯಲ್ಲಿ ಹೋಮ ಮಾಡಲಾಗುತ್ತಿದೆ. ಅಲ್ಲದೇ ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಹೋಮ ಮಾಡಲಾಗುತ್ತಿದೆ. 8 ಬಗೆಯ ಹೋಮಗಳನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಆರಂಭವಾಗಿರುವ ಹೋಮ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಯಾಗಲಿದೆ.

ಹೋಮದ ನಂತರ ಡಿಕೆಶಿ ಅರುಣಾಚಲೇಶ್ವರನ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂದು ಸಂಜೆ 5 ಗಂಟೆಗೆ ತಿರುವಣ್ಣಾಮಲೈಗೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಯಾವುದಾದರೂ ಶಾಪಗಳಿದ್ದರೆ ಭೂ ವರಹ ಹೋಮದಿಂದ ಅದು ನಿವಾರಣೆಯಾಗುತ್ತಂತೆ. ಹೀಗಾಗಿ ಡಿಕೆ ಶಿವಕುಮಾರ್ ಹೋಮ ಮಾಡಿಸುತ್ತಿದ್ದಾರೆ..

ಈ ವೇಳೆ ಮಾತನಾಡಿದ ಡಿಕೆಶಿ, ಎಲ್ಲಾ ವಿಘ್ನಗಳನ್ನ ನಿವಾರಣೆ ಮಾಡಲಿ ಅಂತ ಶುಭ ಮೂಹೂರ್ತದಲ್ಲಿ ಪೂಜೆ ಶುರು ಮಾಡಿದ್ದೇವೆ. ಎರಡು ವರ್ಷಗಳಿಂದ ಬಿಲ್ಡಿಂಗ್ ಕೆಲಸ ನಿಂತಿತ್ತು. ಎಲ್ಲರ ಒಳಿತಿಗಾಗಿ ಮಾಡುತ್ತಿರುವ ಹೋಮ ಇದು. ರಾಜ್ಯಕ್ಕೆ, ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೀವಿ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ ಎಂದರು.

ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಡಿಕೆಶಿ, ಸದ್ಯದಲ್ಲೇ ಪದಗ್ರಹಣದ ದಿನಾಂಕ ನಿಗದಿ ಮಾಡುತ್ತೇವೆ. ಇಂದು ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡಿ, ದಿನಾಂಕ ನಿಗದಿ ಮಾಡಲಾಗುತ್ತದೆ ಎಂದರು. ಇನ್ನೂ ಲಾಕ್‍ಡೌನ್ ಮುಂದುವರಿಕೆ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನಾನೇನು ನಿರ್ಧಾರ ಮಾಡುವುದಕ್ಕೆ ಆಗಲ್ಲ. ಸರ್ಕಾರ ಏನು ತಿರ್ಮಾನ ಮಾಡುತ್ತೋ ಅದನ್ನ ಫಾಲೋ ಮಾಡುತ್ತೀವಿ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದಾರೆ,  ಅವರು ತಿರ್ಮಾನ ಮಾಡುತ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸುತ್ತೀವಿ ಎಂದು ಡಿಕೆಶಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *