ನೀವು ನೋಡಿಕೊಂಡ ಹಾಗೆ, ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ: ಸಚಿವ ಸುರೇಶ್ ಕುಮಾರ್

Public TV
2 Min Read

– 33 ಪಾಸಿಟಿವ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ
– ಪರೀಕ್ಷಾ ಕೇಂದ್ರಗಳಲ್ಲ ಇದು ಸುರಕ್ಷಾ ಕೇಂದ್ರಗಳು

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದು ನಡೆಯುತ್ತಿದ್ದು ಪೋಷಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನೀವು ಹೇಗೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿರೋ ಅದೇ ರೀತಿ ನಾವು ನೋಡಿಕೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೊಸ ರೀತಿಯಲ್ಲಿ ನಡೆಯಲಿದ್ದು, ಇದಕ್ಕೆ ಎಲ್ಲಾ ರೀತಿಯ ಕ್ರಮಗಳು ತೆಗೆದುಕೊಳ್ಳಲಾಗಿದೆ. ಹೊಸ ರೀತಿಯ ಪರೀಕ್ಷೆಗೆ ನೀವು ಸಿದ್ಧರಾಗಿದ್ದೀರಾ? ಎಂಬ ಪ್ರಶ್ನೆಗೆ ಮಾಧ್ಯಮದೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ನಾನು ಈ ಎರಡು ವರ್ಷದಿಂದ ಶಿಕ್ಷಣ ಸಚಿವನಾಗಿದ್ದೇನೆ. ಈ ಹೊಸ ರೀತಿಯ ಪರೀಕ್ಷೆಗೆ ಸರ್ಕಾರ ನಿರ್ಧರಿಸಿದ ದಿನದಿಂದಲೂ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂದರು.

ಪರೀಕ್ಷೆ ಕುರಿತು ಯಾವುದೇ ಪ್ರಶ್ನೆ ಬಂದ್ರು ನಾನು ಅದಕ್ಕೆ ಉತ್ತರ ಕೊಡುತ್ತೇನೆ. ಈ ರೀತಿಯ ಪರಿಸ್ಥಿತಿಯಿಂದ ಪೋಷಕರಲ್ಲಿ ಆತಂಕ ಇರುವುದು ಸಹಜ. ನಾನು ಎಲ್ಲಾ ಪರೀಕ್ಷೆಯ ಕೇಂದ್ರಗಳಿಗೆ ಹೋಗಿದ್ದೇನೆ. ನಮ್ಮ ಪರೀಕ್ಷೆಯ ನೋಡಲ್ ಅಧಿಕಾರಿಗಳು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹೋಗಿದ್ದಾರೆ. ನಾವು ಕೊರೊನಾ ನಿಯಂತ್ರಣವಾಗ ಬೇಕೆಂದು ಎಸ್‍ಓಪಿ ಮಾಡಿದ್ದೇವೆ. ಅದನ್ನು ನಾವೆಲ್ಲಾರು ಪಾಲಿಸಿದ್ದೇವೆ ಎಂದು ಹೇಳಿದರು.

ಎಲ್ಲಾ ಪೋಷಕರಿಗೆ ಒಂದು ಭರವಸೆಯ ಮಾತುಗಳನ್ನು ಹೇಳುತ್ತೇನೆ. ಇದು ನಿಮ್ಮ ಮಕ್ಕಳ ಸುರಕ್ಷಾ ಕೇಂದ್ರಗಳು. ನೀವು ಹೇಗೆ ನಿಮ್ಮ ಮಕ್ಕಳನ್ನು ಕಾಪಾಡುತ್ತಿರೋ ಅದೇ ರೀತಿ ಇಲ್ಲಿಯು ಸಹ ಅವರನ್ನು ನೋಡಿಕೊಳ್ಳುತ್ತೇವೆ. ಅಷ್ಟೇ ಜತನವಾಗಿ ಮಕ್ಕಳನ್ನು ನಾವು ವಾಪಸ್ಸು ಕಳುಹಿಸುತ್ತೇವೆ. ಆದರೆ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆಗೆ ಬರಬೇಕು ಎಂದು ಕೇಳಿಕೊಂಡರು.

ಇತ್ತೀಚೆಗೆ ಸೃಷ್ಟಿಯಾಗಿರುವ ಖಾಸಗಿ ಶಾಲೆಗಳು ಮಕ್ಕಳು ಒಂದು ವೇಳೆ ಶಾಲೆಯ ಶುಲ್ಕ ಕಟ್ಟದಿದ್ದಾರೆ ಹಾಲ್‍ಟಿಕೆಟ್ ಕೊಡುವುದಿಲ್ಲ ಎಂಬ ವಿಚಾರವಾಗಿ ಗೂಂದಲವಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೆ ಹಾಲ್‍ಟಿಕೆಟ್ ಕೊಟ್ಟಿಲ್ಲವೆಂದು ಹೇಳಿದ ವಿದ್ಯಾರ್ಥಿಗಳಿಗೆ ನಾವು ಕೊಡಿಸಿದ್ದೇವೆ. ಈ ನಡುವೆ ದಾಖಲೆಯಾಗದ ವಿದ್ಯಾರ್ಥಿಗಳು ಬಂದಿದ್ದರು ಅವರಿಗೆ ಆಗಸ್ಟ್ ನಲ್ಲಿ ನಡೆಯುವ ಪೂರಕ ಪರೀಕ್ಷೆಗಳಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಈ ಮಧ್ಯೆ ಕೊರೊನಾ ಪಾಸಿಟಿವ್ ಬಂದ ವಿದ್ಯಾರ್ಥಿಗಳು ಸಹ ಪರೀಕ್ಷೆಯನ್ನು ಬರೆಯಲು ಆಸಕ್ತಿಯನ್ನು ತೋರಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪಾಸಿಟಿವ್ ಬಂದ 33 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಂಬಲ ತೋರಿದ್ದಾರೆ. ಈ ಕಾರಣಕ್ಕೆ ಅವರನ್ನು ಕೋವಿಡ್ ಸೆಂಟರ್ ನಿಂದಲೇ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಇಂದು ಸಹ ಯಾವ ವಿದ್ಯಾರ್ಥಿಗಳಿಗೆ ಹಾಲ್‍ಟಿಕೆಟ್ ಸಿಕ್ಕಿಲ್ಲವೆಂದು ಪರೀಕ್ಷಾ ಕೇಂದ್ರಗಳಿಗೆ ಹೋದರೆ ಅವರು ಸಹಾಯ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಇವತ್ತು SSLC ಎಕ್ಸಾಂ – ಈ ಬಾರಿ ಭಿನ್ನ, ವಿಶೇಷ ಪರೀಕ್ಷೆ

ಇನ್ನೂ ಪರೀಕ್ಷೆ ಫಲಿತಾಂಶದ ವಿಚಾರವಾಗಿ ಮಾತನಾಡಿದ ಅವರು, ಆಗಸ್ಟ್ 10 ರೊಳಗೆ ಫಲಿತಾಂಶ ನೀಡುತ್ತೇವೆ. ಮಕ್ಕಳು ತುಂಬಾ ಆತ್ಮವಿಶ್ವಾಸದಿಂದ ಇದ್ದಾರೆ ಪೋಷಕರಿಗೆ ನಾವು ಹೇಳುವುದು ಇಷ್ಟೆ, ಈ ಪರೀಕ್ಷೆಯನ್ನು ನಾವು ಮಾಡುತ್ತಿರುವುದು ಮಕ್ಕಳಿಗೆ ಅವರ ಕಲಿಕೆಯ ಮಟ್ಟದ ಬಗ್ಗೆ ತಿಳಿಸಲು. ಇಲ್ಲಿ ಪಾಸ್-ಫೇಲ್ ಎಂಬ ಪ್ರಶ್ನೆ ಬರುವುದಿಲ್ಲ. ಮಕ್ಕಳನ್ನು ಪೋಷಕರು ಧೈರ್ಯದಿಂದ ಕಳುಹಿಸಿಕೊಡಿ ಎಂದು ಕೇಳಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *