ನೀನು ಎಷ್ಟು ವರ್ಷ ಆಯ್ತು ಉಳುಮೆ ಮಾಡಿ – ಕೋಡಿಹಳ್ಳಿಗೆ ರೇಣುಕಾಚಾರ್ಯ ಪ್ರಶ್ನೆ

Public TV
2 Min Read

– ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ
– ನಾವು ಬಿಜೆಪಿಯವರು ಸಭ್ಯಸ್ಥರು

ಬೆಂಗಳೂರು: ಸಾರಿಗೆ ಸೌಕರರ ಹೋರಾಟಕ್ಕೆ ಕೈಜೋಡಿಸಿದ್ದ ರೈತ ಮುಖಂಡ ಕೋಡಿಹಳ್ಳಿ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋಡಿಹಳ್ಳಿ ವಿರುದ್ಧ ಏಕವಚನ ಪ್ರಯೋಗ ಮಾಡಿದ ಶಾಸಕರು, ನೀನು ಯಾರಯ್ಯ ನನ್ ಬಗ್ಗೆ ಮಾತಾಡೋದಕ್ಕೆ. ನೀನು ಅಕ್ರಮ ಆಸ್ತಿ ಮಾಡಿದ್ದೀಯಾ, ಕೋಡಿಹಳ್ಳಿಯಲ್ಲಿದ್ದಾಗ ಎಷ್ಟಿತ್ತು ಆಸ್ತಿ?, ಐಷಾರಾಮಿ ಜೀವನ ಮಾಡ್ತಿದ್ದೀಯಾ, ಎಷ್ಟು ಐಷಾರಾಮಿ ಕಾರು ಇವೆ?. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಬ್ಲ್ಯಾಕ್ ಮೇಲರ್. ನನ್ನಲ್ಲಿ ಅವನ ಮನೆ ಬಂಗಲೆ ಫೋಟೋ ಇದೆ, ಐಷಾರಾಮಿ ಕಾರು ಇವೆ. ಎರಡೂವರೆ ಎಕರೆ ಇದ್ದ ಜಮೀನು ಈಗೆಷ್ಟು ಆಯ್ತು ಎಂದು ಪ್ರಶ್ನೆಗಳ ಸುರಿಮಳೆಗೈದ್ರು.

ಕೋಡಿಹಳ್ಳಿ ಚಂದ್ರಶೇಖರ್ ವಿಭಿನ್ನ ಪಾತ್ರಗಳು ಮಾಡ್ತಾರೆ. ಹಸಿರು ಶಾಲು ಹಾಕಿ ರೈತ ಮುಖಂಡ ಅಂತಾರೆ. ಕೋಡಿಹಳ್ಳಿಗೂ ಸಾರಿಗೆ ನೌಕರರಿಗೂ ಏನು ಸಂಬಂಧ?, ನೀನು ಎಷ್ಟು ವರ್ಷ ಆಯ್ತು ಉಳುಮೆ ಮಾಡಿ. ಹಳ್ಳಿ ಬಿಟ್ಟು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಐಷಾರಾಮಿ ಬಂಗಲೆ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ. ನನ್ನ ವೈಯಕ್ತಿಕ ವಿಚಾರ ಮಾತನಾಡಲು ನೀನ್ಯಾರು?, ಬಿಟ್ಟಿ ಹೋರಾಟ, ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಹೆಂಡತಿ, ಮಕ್ಕಳು ಎಲ್ಲರ ಹತ್ತಿರ ಐಷಾರಾಮಿ ಕಾರು ಇದೆ. ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಕಿಡಿಕಾರಿದರು.

ಪ್ರತಾಪ್ ಚಂದ್ರಶೆಟ್ಟಿ ರಾಜೀನಾಮೆ ಕೊಡಲು ಕಾಂಗ್ರೆಸ್ ಬಿಡಲಿಲ್ಲ. ಸಭಾಪತಿ ಘಟನೆಯಲ್ಲಿ ಬಲಿಪಶು ಆದ್ರು. ಬಿಹಾರ್, ಉತ್ತರಪ್ರದೇಶದಲ್ಲಿ ಗೂಂಡಾ ವರ್ತನೆ ನಡೆದಿತ್ತು. ಕಾಂಗ್ರೆಸ್ ಆಡಳಿತ ಮಾಡಿದ್ದ ಕಡೆ ಗೂಂಡಾರಾಜ್ ಇತ್ತು. ಹೀಗಾಗಿ ಕಾಂಗ್ರೆಸ್ ಎಲ್ಲ ಕಡೆ ಅಡ್ರೆಸ್ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ಸಿಗೆ ರಾಜ್ಯದ ಜನರು ಛೀಮಾರಿ ಹಾಕ್ತಿದ್ದಾರೆ. ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಭಾಪತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಬರುವುದಿಲ್ಲ ಎಂದು ಉಪಸಭಾಪತಿ ಕೂತಿದ್ದರು. ಕಾಂಗ್ರೆಸ್ಸಿನವರು ಉಪಸಭಾಪತಿ ಮೇಲೆ ಹಲ್ಲೆ ಮಾಡಿದ್ದರು. ಉಪಸಭಾಪತಿ ರಕ್ಷಣೆಗಾಗಿ ಬಿಜೆಪಿ ಹೋಗಿದೆ. ನಾವು ಬಿಜೆಪಿಯವರು ಸಭ್ಯಸ್ಥರು, ಕಾಂಗ್ರೆಸ್ಸಿನವರೇ ಗಲಾಟೆ ಮಾಡಿದ್ದು ಎಂದು ಗರಂ ಆದರು.

ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ. ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿ ಸರ್ಕಾರ ಮಾಡಿದೆ. ಆದರೆ ಜೆಡಿಎಸ್ ಗೆ ಯಾರ ಅನಿವಾರ್ಯ ಅನ್ನೋದು ನನಗೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಎಲ್ಲ ಮಾತಾಡೋಕೆ ನಾನು ಚಿಕ್ಕವನು, ವರಿಷ್ಠರು ನಿರ್ಧಾರ ಮಾಡ್ತಾರೆ. ಸಭಾಪತಿ ಮೇಲೆ ಅವಿಶ್ವಾಸಕ್ಕೆ ನಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅವರು ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *