ನೀತಿ ಆಯೋಗದ ಎಸ್‍ಜಿಡಿ ಸೂಚ್ಯಂಕದಲ್ಲಿ ಸುಧಾರಿಸಿದ ಕರ್ನಾಟಕದ ಸ್ಥಾನ

Public TV
1 Min Read

ಬೆಂಗಳೂರು: ವಿಶ್ವ ಸಂಸ್ಥೆಯು ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳು- 2030 ರ ಸಾಧನೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ನೀತಿ ಆಯೋಗದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯದ ಅಂಕ ಹಾಗೂ ಸ್ಥಾನದಲ್ಲಿ ಗಣನೀಯ ಸುಧಾರಣೆ ಆಗಿರುವ ಬಗ್ಗೆ ನೀತಿ ಆಯೋಗದ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಆದ್ಯತೆ ನೀಡಬೇಕಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಗರ್ಭಿಣಿಯರು ಹಾಗೂ ಮಕ್ಕಳ ಅಪೌಷ್ಟಿಕತೆ, ಲಿಂಗ ಸಮಾನತೆ, ವಸತಿ, ಶಿಕ್ಷಣ ಮೊದಲಾದ ವಿಷಯಗಳ ಕುರಿತು ಇನ್ನಷ್ಟು ಗಮನ ಹರಿಸುವಂತೆ ನೀತಿ ಆಯೋಗವು ಸಲಹೆ ನೀಡಿದೆ. ಈಗಾಗಲೇ ಆಯವ್ಯಯದಲ್ಲಿ ರಾಜ್ಯದ ಎಲ್ಲ ಯೋಜನೆಗಳು ಎಸ್‍ಡಿಜಿ ಗುರಿ ಸಾಧನೆಯನ್ನು ಕೇಂದ್ರೀಕರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆಯೇ ಸರ್ಕಾರ ಕಾರ್ಯನಿರ್ವಹಿಸಲಿದೆ. ಸುಸ್ಥಿರ ಅಭಿವೃದ್ಧಿ 2030 ಗುರಿಗಳನ್ನು ಸಾಧಿಸುವತ್ತ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

ಎಸ್.ಜಿ.ಡಿ ಇಂಡಿಯಾ 2020- 21 ವರದಿಯ ಪ್ರಕಾರ 73 ಸೂಚ್ಯಂಕ ಪಡೆದಿರುವ ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 16 ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಕರ್ನಾಟಕ ರಾಜ್ಯ 7ನೇ ಗುರಿ ಸಾಧಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಳಿದ ಒಂಭತ್ತು ಗುರಿಗಳ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದು, ಬಾಕಿ 5 ಗುರಿಗಳ ಸಾಧನೆಯಲ್ಲಿ ಸಹ ಉತ್ತಮ ಸಾಧನೆ ತೋರುತ್ತಿದೆ.

ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಗರಾಭಿವೃದ್ಧಿ (ಪೌರಾಡಳಿತ), ಇ-ಆಡಳಿತ, ವಸತಿ ಇಲಾಖೆ(ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ), ವಿತ್ತೀಯ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಗಳು ಹೊಸ ಕ್ರಮವನ್ನು ಜಾರಿಗೆ ತರುತ್ತಿವೆ. ಇದು ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸುಧಾರಿಸಲಿದೆ ಅಲ್ಲದೆ ನಾಗರಿಕರಿಗೆ ಉತ್ತಮ ಹಾಗೂ ಸುಸ್ಥಿರ ಭವಿಷ್ಯವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *