ಲಕ್ನೋ: ನಿವೃತ್ತ ಸೇನಾಧಿಕಾರಿ ಮನೆಯಲ್ಲಿ ಬೆಂಕಿಕಾಣಿಸಿಕೊಂಡ ಪರಿಣಾಮ ಪತಿ-ಪತ್ನಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ನಿವೃತ್ತ ಸೇನಾಧಿಪತಿ ಆರ್.ಪಿ.ಸಿಂಗ್(82) ಮತ್ತು ಅವರ ಪತ್ನಿ ಮಾಲ್ಟಿ ಸಿಂಗ್ (75) ಈ ದುರಂತ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳಾಗಿದ್ದಾರೆ.
ಶುಕ್ರವಾರ ಸಂಜೆ 9ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಮನೆಗೆ ತಗುಲಿರುವುದು ಮನೆಯಲ್ಲಿ ಇರುವ ದಂಪತಿಗೆ ತಿಳಿದಿಲ್ಲ. ಆದರೆ ಮನೆಯಿಂದ ಹೊಗೆ ಬರುತ್ತಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿ ಹತ್ತಿರದ ಕೈಲಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆರ್.ಪಿ.ಸಿಂಗ್ ಮತ್ತು ಅವರ ಪತ್ನಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಬೆಂಕಿ ಅವಘಡ ವೇಳೆ ದಂಪತಿ ಇಬ್ಬರೇ ಮನೆಯಲ್ಲಿ ಇದ್ದರು. ಇವರ ಮಕ್ಕಳು ನೋಯ್ಡಾದಲ್ಲೇ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಇವರನ್ನು ರಕ್ಷಿಸಲು ಬಾಗಿಲುನ್ನು ಒಡೆದು ಮುರಿಯ ಬೇಕಾಯಿತು. ಬಾಗಿಲು ಮುರಿದು ಒಳಗೆ ಹೋದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆದರೆ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಸೆಕ್ಟರ್ 20ರ ಎಸ್‍ಎಚ್‍ಒ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.