ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ

Public TV
2 Min Read

– 2 ಸಾವಿರ ಕೋಳಿ ಮರಿಗಳಿಗೆ ಅರ್ಡರ್

ರಾಂಚಿ: ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯ ಕಡಕ್‍ನಾಥ್ ಕಪ್ಪು ಕೋಳಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಮನಗೆದ್ದಿದ್ದು, ನಿವೃತ್ತಿಯ ಬಳಿಕ ಕುಕ್ಕುಟೋದ್ಯಮ ಆರಂಭಿಸಲು ಧೋನಿ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಧೋನಿ ಅವರ ಆರ್ಗಾನಿಕ್ ಫಾರ್ಮ್‍ನೊಂದಿಗೆ ರಾಂಚಿಯಲ್ಲಿರುವ ಸಾವಯವ ಕೃಷಿಗೆ ಸಂಬಂಧಿಸಿದ ತಂಡ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಕೃಷಿಕರಿಂದ ಸುಮಾರು 2 ಸಾವಿರ ಕಟಕ್‍ನಾಥ್ ಕೋಳಿ ಮರಿಗಳು ನೀಡುವಂತೆ ಅರ್ಡರ್ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಭೋಪಾಲ್‍ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಜಬುವಾ ಜಿಲ್ಲೆಯ ರೈತ ವಿನೋದ್ ಮೇಧಾ ಅವರಿಗೆ ಡಿಸೆಂಬರ್ 15ರ ವೇಳೆಗೆ ಸುಮಾರು 2 ಸಾವಿರ ಕೋಳಿ ಮರಿಗಳನ್ನು ನೀಡುವಂತೆ ಅರ್ಡರ್ ನೀಡಲಾಗಿದೆ. ಧೋನಿ ಅವರ ತಂಡ ರಾಂಚಿಯಲ್ಲಿ ಈ ಅರ್ಡರ್ ಅನ್ನು ಪಡೆಯಲಿದೆ.

ಮೂರು ತಿಂಗಳ ಹಿಂದೆ ಧೋನಿ ಫಾರ್ಮ್ ಮ್ಯಾನೇಜರ್ ನಮ್ಮೊಂದಿಗೆ ಕೃಷಿ ವಿಕಾಸ್ ಕೇಂದ್ರದ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಆ ಬಳಿಕ ಅವರು ನಮ್ಮಿಂದ ಅವರು ಹೆಚ್ಚಿನ ಮಾಹಿತಿ ಪಡೆದುಕೊಂಡು ಸುಮಾರು 2 ಮರಿಗಳಿಗೆ ಅರ್ಡರ್ ನೀಡಿದ್ದಾರೆ. ಇದನ್ನು ನಾನು ಡಿಸೆಂಬರ್ 15ರಂದು ರಾಂಚಿಯಲ್ಲಿ ಅವರಿಗೆ ನೀಡಬೇಕಿದೆ. ಇದಕ್ಕೆ ಅವರು ಈಗಾಗಲೇ ಮುಂಗಡ ಹಣವನ್ನು ಪಾವತಿ ಮಾಡಿದ್ದಾರೆ. ದೇಶದ ಖ್ಯಾತ ಕ್ರಿಕೆಟ್ ಆಟಗಾರನಿಗೆ ಕಡಕ್‍ನಾಥ್ ಕೋಳಿಗಳನ್ನು ಪೂರೈಕೆ ಮಾಡುತ್ತಿರುವುದು ಹೆಮ್ಮೆ ಎನಿಸಿದೆ ಎಂದು ವಿನೋದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತ ಮಾಹಿತಿಯನ್ನು ಖಚಿತ ಪಡಿಸಿರುವ ಕೃಷಿ ವಿಕಾಸ್ ಕೇಂದ್ರದ ಕಡಕ್‍ನಾಥ್ ಕೋಳಿ ವಿಭಾಗದ ಉಸ್ತುವಾರಿ ವಿಜ್ಞಾನಿ ಡಾ.ಚಂದನ್ ಕುಮಾರ್ ಅವರು, ರಾಂಚಿಯಲ್ಲಿ ಧೋನಿ ಅವರ ಕೃಷಿ ಜಮೀನನ್ನು ನಿರ್ವಹಿಸುತ್ತಿರುವ ಕುನಾಲ್ ಗೌರವ್ ಅವರು ಕಡಕ್‍ನಾಥ್ ಮರಿಗಳನ್ನು ಪಡೆಯಲು ಸಂಪರ್ಕ ಮಾಡಿದ್ದರು. ಮೊದಲು ಅವರು ರಾಂಚಿಯ ಪಶುವೈದ್ಯಕೀಯ ಕಾಲೇಜಿನ ತಜ್ಞರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದರು. ನಾನು ಅದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಕಾರಣ ಕಾಲೇಜಿನ ತಜ್ಞರು ನನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿವರಿಸಿದ್ದಾರೆ.

2019ರ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಧೋನಿ, ರಾಂಚಿಯಲ್ಲಿರುವ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ಜುಲೈ ತಿಂಗಳಿನಲ್ಲಿಯೂ ಧೋನಿ 43 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದ ಕೆಲ ಫೋಟೋಗಳು ವೈರಲ್ ಆಗಿದ್ದವು. ಧೋನಿ ಅವರ ಸಾವಯವ ಕೃಷಿ ತಂಡ ದೇಶೀಯ ಸಹೀವಾಲ್ ತಳಿಯ ಹಸು ಮತ್ತು ಬಾತುಕೋಳಿ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಅಂದಹಾಗೇ ಕಡಕ್‍ನಾಥ್ ಕೋಳಿ ಮಧ್ಯಪ್ರದೇಶದ ಬುಡಕಟ್ಟು ಮೂಲದಾಗಿದ್ದು, ಈ ಕೋಳಿಯ ಮಾಂಸ ಹಾಗೂ ಮೊಟ್ಟೆಗೆ ದೇಶಾದ್ಯಂತ ಭಾರೀ ಬೇಡಿಕೆ ಇದೆ. ಈ ಕೋಳಿಯ ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇದ್ದು, ಮಧುಮೇಹ ಮತ್ತು ಹೃದಯರೋದ ಖಾಯಿಲೆ ಇರುವ ಮಾಂಸ ಪ್ರಿಯರಿಗೆ ಹೇಳಿ ಮಾಡಿಸಿದ ತಳಿಯಾಗಿದೆ. 2018ರಲ್ಲಿ ಜಬುವಾ ಜಿಲ್ಲೆಯ ಈ ತಳಿಗೆ ಜಿಐ ಟ್ಯಾಗ್ (ಭೌಗೋಳಿಕ ವೈಶಿಷ್ಟ್ಯತೆಯ ಗುರುತು) ಕೂಡ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *